

ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದ ಎಚ್‌ಎಲ್‌ಸಿ ಕಾಲುವೆಯ ನಂ.2ವಿತರಣಾ ನಾಲೆಯ ಉಪಕಾಲುವೆಯ ಹೂಳು ಎತ್ತಬೇಕು ಮತ್ತು 4ಎಲ್ ಸರ್ವೀಸ್ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಮೆಟ್ರಿ ಗ್ರಾಮದ ರೈತ ಎಚ್.ಶಿವಪುತ್ರಪ್ಪ, ರೈತರಾದ ಎಂ.ತಿಪ್ಪೇಶ್, ಎಂ.ತಿಪ್ಪೆರುದ್ರಪ್ಪ, ವಿ.ರಾಚಪ್ಪ, ಕರಿಬಸವಸ್ವಾಮಿ, ಅನಿಲ್, ದೊಡ್ಡ ಬಸಪ್ಪ, ಡಿ.ಜಡೆಪ್ಪ, ಎಚ್.ಭೀಮರೆಡಿ, ಎಂ.ಜಡೆಪ್ಪ, ಎಚ್.ಪಂಪಣ್ಣ, ಡಿ.ಶರಣಪ್ಪ ಇತರರು ಒತ್ತಾಯಿಸಿದ್ದಾರೆ.
ತಹಸೀಲ್ದಾರ್ ಗೌಸಿಯಾಬೇಗಂಗೆ ಗುರುವಾರ ಮನವಿ ಸಲ್ಲಿಸಿದರು. ಉಪ ಕಾಲುವೆಯಲ್ಲಿ ಹೂಳುತುಂಬಿ ನೀರು ಹರಿಯದಂತಾಗಿ, ಸೊಳ್ಳೆ ಮತ್ತು ಕೀಟಗಳ ಕಾಟ ಹೆಚ್ಚಾಗತೊಡಗಿದೆ. ನೀರು ನಿಂತಲ್ಲೇ ನಿಂತು ದುರ್ನಾತ ಬೀರುತ್ತಿದೆ. ಈ ಕಾಲುವೆಯ ಎರಡು ಬದಿಗೂ ಸರ್ವೀಸ್ ರಸ್ತೆ ಮೇಲೆ ಜಂಗಲ್ ಬೆಳೆದು, ವಾಹನಗಳ ಸಂಚಾರ, ರೈತರ ಓಡಾಟಕ್ಕೆ ಅಡೆ-ತಡೆ ಉಂಟಾಗುತ್ತಿದೆ. ಹೂಳು ತೆಗೆಯಲು, ಸರ್ವೀಸ್ ರಸ್ತೆ ಅಭಿವೃದ್ಧಿಪಡಿಸಲು ಕೋರಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ. ಆದರೆ, ಪ್ರಯೋಜನವಾಗಿಲ್ಲ. ಸಮಸ್ಯೆ ಪರಿಹರಿಸಿದರೆ ಅಂದಾಜು 350 ಎಕರೆ ಕೃಷಿ ಪ್ರದೇಶಕ್ಕೆ ನೀರಾವರಿ ಸಿಗಲಿದೆ. ಕೂಡಲೇ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈಗಾಗಲೇ ಫೆ.14ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಿರುವುದಾಗಿ ರೈತರು ತಿಳಿಸಿದ್ದಾರೆ.