

ಕಂಪ್ಲಿ: ತಾಲೂಕಿನ ದೇವಸಮುದ್ರ ಮತ್ತು ಹೊಸದರೋಜಿ ಗ್ರಾಮಗಳ ವಿದ್ಯಾರ್ಥಿನಿಯರು ಪಿಯು ಶಿಕ್ಷಣಕ್ಕಾಗಿ ಕುಡುತಿನಿ, ಬಳ್ಳಾರಿ, ಹೊಸಪೇಟೆ, ಕಂಪ್ಲಿಗೆ ತೆರಳಬೇಕಿರುವುದರಿಂದ ಸ್ಥಳೀಯವಾಗಿ ಸರ್ಕಾರಿ ಪಿಯು ಕಾಲೇಜು ಆರಂಭಿಸಬೇಕೆಂಬ ಕೂಗು ಕೇಳಿ ಬರುತ್ತಿದೆ.
ದೇವಸಮುದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ 2020-21ರಲ್ಲಿ 51 ವಿದ್ಯಾರ್ಥಿನಿಯರು, 56 ವಿದ್ಯಾರ್ಥಿಗಳು, 2021-22ರಲ್ಲಿ 62 ವಿದ್ಯಾರ್ಥಿನಿಯರು, 53 ವಿದ್ಯಾರ್ಥಿಗಳು, 2022-23ರಲ್ಲಿ 66 ವಿದ್ಯಾರ್ಥಿನಿಯರು, 77ವಿದ್ಯಾರ್ಥಿಗಳು, ಪ್ರಸಕ್ತ ಸಾಲಿನಲ್ಲಿ 40 ವಿದ್ಯಾರ್ಥಿನಿಯರು, 55 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸ್ಥಳೀಯವಾಗಿ ಪಿಯು ಕಾಲೇಜು ಮಂಜೂರಾದರೆ ಇವರೆಲ್ಲರಿಗೂ ಅನುಕೂಲಗುತ್ತದೆ.
ಹೊಸದರೋಜಿ ಸರ್ಕಾರಿ ಪ್ರೌಢಶಾಲೆಯಲ್ಲಿ 2020-21ರಲ್ಲಿ 74 ವಿದ್ಯಾರ್ಥಿನಿಯರು, 83 ವಿದ್ಯಾರ್ಥಿಗಳು, 2021-22ರಲ್ಲಿ 106 ವಿದ್ಯಾರ್ಥಿನಿಯರು, 83 ವಿದ್ಯಾರ್ಥಿಗಳು, 2022-23ರಲ್ಲಿ 108 ವಿದ್ಯಾರ್ಥಿನಿಯರು, 93 ವಿದ್ಯಾರ್ಥಿಗಳು, ಪ್ರಸಕ್ತ ಸಾಲಿನಲ್ಲಿ 110 ವಿದ್ಯಾರ್ಥಿನಿಯರು, 74 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಗೆ ದಾಖಲಾಗಿದ್ದಾರೆ.
ಪ್ರತಿವರ್ಷ ಶೇ.90ಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿ ಪಿಯು ಶಿಕ್ಷಣಕ್ಕೆ ತೆರಳುತ್ತಿದ್ದಾರೆ. ಸ್ವಗ್ರಾಮದಲ್ಲೇ ಪಿಯು ಕಾಲೇಜು ಆರಂಭಗೊಂಡಲ್ಲಿ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣಕ್ಕಾಗಿ ಬೇರೆಡೆ ಹೋಗುವುದು ತಪ್ಪುತ್ತದೆ.
ಸ್ಥಳೀಯವಾಗಿ ಕಾಲೇಜು ಇಲ್ಲದ ಕಾರಣ ಹೈಸ್ಕೂಲ್ ನಂತರದ ಶಿಕ್ಷಣಕ್ಕೆ ಬೇರೆಡೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಾರೆ. ಇದರಿಂದ ಹಲವು ವಿದ್ಯಾರ್ಥಿನಿಯರು ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮುಖ್ಯವಾಗಿ ಗ್ರಾಮೀಣ ವಿದ್ಯಾರ್ಥಿನಿಯರು ಕಾಲೇಜು ಶಿಕ್ಷಣದಿಂದ ದೂರ ಉಳಿಯಲು ಕಾರಣವಾಗುತ್ತಿದೆ.
ದೇವಸಮುದ್ರದಲ್ಲಿ ಪಿಯು ಕಾಲೇಜು ಆರಂಭಿಸಿದರೆ ಚಿಕ್ಕಜಾಯಿಗನೂರು, ಹಂಪಾದೇವನಹಳ್ಳಿ, ಮೆಟ್ರಿ, ದೇವಲಾಪುರ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಹೊಸದರೋಜಿಯಲ್ಲಿ ಕಾಲೇಜು ಆರಂಭದಿಂದ ದರೋಜಿ, ಸೋಮಲಾಪುರ, ಹೊಸಮಾದಾಪುರ, ಮಾವಿನಹಳ್ಳಿ, ಸುಗ್ಗೇನಹಳ್ಳಿ, ಗೋನಾಳ್, ಹೊನ್ನಳ್ಳಿ, ತಿಮ್ಮಲಾಪುರ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ನಿತ್ಯ ಕಾಲೇಜು ಶಿಕ್ಷಣಕ್ಕೆ ತೆರಳಲು ಸಕಾಲಕ್ಕೆ ಬಸ್ ಸೌಲಭ್ಯ ಇಲ್ಲದಿರುವುದರಿಂದ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ. ಗ್ರಾಮದಲ್ಲಿಯೇ ಪಿಯು ಕಾಲೇಜು ಆರಂಭವಾಗಬೇಕು ಎನ್ನುವ ಗ್ರಾಮಸ್ಥರ ಬೇಡಿಕೆ ಈಡೇರಬೇಕಿದೆ.
ಹೊಸದರೋಜಿಯಲ್ಲಿ ಪಿಯು ಕಾಲೇಜು ಆರಂಭಿಸುವಂತೆ 2018ರಿಂದಲೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದ್ದು, ಶೀಘ್ರವೇ ಕಾಲೇಜು ಆರಂಭಿಸಲು ಮುಂದಾಗಬೇಕು.ನಾಗರಾಜ ಭೋವಿ, ರಾಜ್ಯ ಪ್ರ. ಕಾರ್ಯದರ್ಶಿ, ದಲಿತ ಪ್ಯಾಂಥರ್ ಆಫ್ ಇಂಡಿಯಾ, ಹೊಸದರೋಜಿ