ಗಾಳಿಯ ರಭಸಕ್ಕೆ ನೆಲಕ್ಕುರುಳಿದ ಬಾಳೆ

Kampli banana tree loss
ಕಂಪ್ಲಿಯಲ್ಲಿ ಗಾಳಿಗೆ ನೆಲಕ್ಕುರುಳಿದ ಬಾಳೆ ಕಂಬಗಳು.
Published on

ಕಂಪ್ಲಿ : ಗಾಳಿಯ ರಭಸಕ್ಕೆ ಕಂಪ್ಲಿ, ರಾಮಸಾಗರ, ಅರಳಿಹಳ್ಳಿ, ಶಂಕರಸಿಂಗ್ ಕ್ಯಾಂಪ್, ನೆಲ್ಲೂಡಿಕೊಟ್ಟಾಲ್‌ಗಳಲ್ಲಿ ಬೆಳೆದ ಸುಗುಂದಿ, ಯಾಲಕ್ಕಿ, ಜಿ9 ತಳಿಯ ಬಾಳೆ ಬೆಳೆ ನೆಲಕ್ಕೊರಗಿದೆ. ಬಾಳೆ ಬೆಲೆ ಮಾರುಕಟ್ಟೆಯಲ್ಲಿ ಕುಸಿತಗೊಂಡು ರೈತರು ನಷ್ಟದಲ್ಲಿದ್ದಾರೆ.

ಕೊನೆ ಹಂತದ ಕೊಯ್ಲಿನ ಬಾಳೆ ಸೋಮವಾರ ಬೀಸಿದ ಗಾಳಿಗೆ ಬಿದ್ದಿದ್ದರಿಂದ ರೈತರು ಲಾಭದಿಂದ ವಂಚಿತರಾಗಿದ್ದಾರೆ. ಯಾಲಕ್ಕಿ ಬಾಳೆ ಬೆಳೆಗೆ ಎಕರೆಗೆ 1ಲಕ್ಷ ರೂ., ಸುಗುಂದಿ 60 ಸಾವಿರ ರೂ., ಜಿ9 ತಳಿ ಬಾಳೆ ಬೆಳೆ ಎಕರೆಗೆ 1.5 ಲಕ್ಷ ರೂ. ಖರ್ಚು ಮಾಡಿದ್ದಾರೆ. ಶಂಕರಸಿಂಗ್‌ಕ್ಯಾಂಪ್, ನೆಲ್ಲೂಡಿಕೊಟ್ಟಾಲ್, ಅರಳಿಹಳ್ಳಿಗಳಲ್ಲಿ ಜಿ9 ಕನ್ಯಾಫಲ ಬಾಳೆ ಬಳೆ ನೆಲಕ್ಕುರುಳಿದೆ. 15ರಿಂದ 18ಅಡಿ ಎತ್ತರ ಇರುವ ಈ ಬಾಳೆ ಪ್ರಖರ ಬಿಸಿಲು, ರಭಸದ ಗಾಳಿಗೆ ಕಾಂಡ ಮುರಿದು ನೆಲಕ್ಕೆ ಬಿದ್ದಿವೆ. ಒಂದು ತಿಂಗಳಲ್ಲಿ ಕೊಯ್ಲಿಗೆ ಬರಲಿದ್ದು, ಸಾವಿರಾರು ರೂ. ನಷ್ಟ ಎದುರಾಗಿದೆ.

ಮಾರುಕಟ್ಟೆಯಲ್ಲಿ ಸುಗುಂದಿ ಕೆಜಿಗೆ 18 ರೂ.ಗಳಿಂದ 13 ರೂ. ಗೆ, ಯಾಲಕ್ಕಿ 50 ರೂ.ಗಳಿಂದ 36 ರೂ.ಗೆ ದರ ಕುಸಿತಗೊಂಡಿದೆ. ಬಾಳೆ ಕಂಬಗಳಿಗೆ ಆಧಾರವಾಗಿ ಬೊಂಬು ಅಳವಡಿಸಿದ್ದರೂ ಗಾಳಿಗೆ ಎಕರೆಗೆ 300ಬಾಳೆಕಂಬಗಳು ಬಿದ್ದು ನಷ್ಟವುಂಟಾಗಿದೆ ಎಂದು ಬಾಳೆಬೆಳೆಗಾರರಾದ ಕಾಕರ್ಲ ಭಾಸ್ಕರರಾವ್, ಚಲ್ಲಾ ರಂಗಯ್ಯ, ಅಯ್ಯೋದಿ ವೆಂಕಟೇಶ ಅವಲೊತ್ತಿಕೊಂಡಿದ್ದಾರೆ.

ಗಾಳಿಗೆ ಬಾಳೆ ಬೆಳೆ ನಷ್ಟವಾಗಿದ್ದು ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ನಷ್ಟಪರಿಹಾರ ವಿತರಿಸಬೇಕಿದೆ. ಬಾಳೆ ನಿರ್ವಹಣೆ ವೆಚ್ಚ ಅಧಿಕವಾಗುತ್ತಿದ್ದು, ಇದರ ಪ್ರಮಾಣದಲ್ಲಿ ಬಾಳೆ ದರ ದೊರಕುತ್ತಿಲ್ಲ. | ಕಾಕರ್ಲ ಭಾಸ್ಕರರಾವ್ ಬಾಳೆ ಬೆಳೆಗಾರ, ಅರಳಿಹಳ್ಳಿ ತಾಲೂಕಿನಲ್ಲಿ 1500 ಹೆಕ್ಟೇರ್ ಪ್ರದೇಶದಲ್ಲಿ ಬಾಳೆಬೆಳೆದಿದ್ದಾರೆ. ಎಸ್‌ಟಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಶೇ.33 ಕ್ಕಿಂತ ಹೆಚ್ಚಿನ ಬೆಳೆ ಹಾನಿಯಾದಲ್ಲಿ ಮಾತ್ರ ಹೆಕ್ಟೇರ್‌ಗೆ 28 ಸಾವಿರ ರೂ. ನಷ್ಟ ಪರಿಹಾರ ದೊರೆಯಲಿದೆ. ಗಾಳಿ ರಭಸ ತಡೆಯಲು ಬದುವಿನಲ್ಲಿ ಗಾಳಿಮರಗಳನ್ನು ಬೆಳೆಸಬೇಕಿದೆ. | ಆರ್.ಜೆ.ಕರಿಗೌಡರ್ ತೋಟಗಾರಿಕೆ ಸಹಾಯಕ ನಿರ್ದೇಶಕ, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net