

ಕಂಪ್ಲಿ: 5ನೇ ವಾರ್ಡ್ ಸದಸ್ಯೆಯ ಅವಿರತ ಪ್ರಯತ್ನದಿಂದ ನಲವತ್ತು ವರ್ಷಗಳ ನಂತರ ನಿವೇಶನ ಪಟ್ಟಾ ದೊರೆತಿದ್ದು, ಸುಭದ್ರವಾಗಿ ಕಾಪಾಡಿಕೊಳ್ಳಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಪಟ್ಟಣದ ಇಂದಿರಾ ನಗರದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 5ನೇ ವಾರ್ಡ್‌ನ ಕೊಳೆಗೇರಿ ನಿವಾಸಿಗಳಿಗೆ ನಿವೇಶನ ಪಟ್ಟಾ ವಿತರಿಸಿ ಬುಧವಾರ ಮಾತನಾಡಿದರು. 2023ರ ವಿಧಾನಸಭಾ ಚುನಾವಣೆ ನೀತಿಸಂಹಿತೆ ಜಾರಿ ಮುನ್ನವೇ ಪಟ್ಟಾ ವಿತರಿಸಬೇಕಿದ್ದು, ವಿರೋಧ ಪಕ್ಷದವರ ಒತ್ತಡದಿಂದ ವಿತರಣೆಗೆ ಅಡ್ಡಿಯಾಯಿತು. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಪಟ್ಟಾ ವಿತರಿಸಲಾಗಿದೆ ಎಂದರು.
ಪುರಸಭೆ ಸದಸ್ಯೆ ಸುಮಾ ರಾಘವೇಂದ್ರ ಮಾತನಾಡಿ, ನಾಲ್ಕು ದಶಕಗಳಿಂದ ನಾನಾ ತಾಂತ್ರಿಕ ಕಾರಣಗಳಿಂದ ಪಟ್ಟಾ ನೀಡಿಕೆ ಕಗ್ಗಂಟಾಗಿತ್ತು. ಶಾಸಕ ಜೆ.ಎನ್.ಗಣೇಶ್ ಅವರ ಮಾರ್ಗದರ್ಶನದಲ್ಲಿ, ಅಧಿಕಾರಿಗಳ ಸಹಕಾರದಿಂದ ಪಟ್ಟಾ ವಿತರಿಸಲು ಸಾಧ್ಯವಾಗಿದೆ. ಮೊದಲ ಹಂತದಲ್ಲಿ 128 ಪಟ್ಟಾ ವಿತರಿಸಲಾಗಿದ್ದು, ಉಳಿದವನ್ನು ಎರಡನೇ ಹಂತದಲ್ಲಿ ವಿತರಿಸಲು ಕ್ರಮವಹಿಸಲಾಗುವುದು. ವಾರ್ಡ್ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ನೀಡಲು ಶಾಸಕರು ಮುಂದಾಗಬೇಕು ಎಂದು ಮನವಿ ಮಾಡಿದರು.
ಮುಖ್ಯಾಧಿಕಾರಿ ಕೆ.ದುರುಗಣ್ಣ, ಪುರಸಭೆ ಸದಸ್ಯರಾದ ಕೆ.ಎಸ್.ಚಾಂದ್‌ಬಾಷಾ, ಮೌಲಾ, ಪ್ರಮುಖರಾದ ಕರೇಕಲ್ ಮನೋಹರ, ಬಿ.ವೀರಭದ್ರಪ್ಪ, ಶ್ರೀನಿವಾಸ್, ಸತ್ಯಪ್ಪ, ಜಿ.ಸುಧಾಕರ, ಎಂ.ಪ್ರಸಾದ್, ಕಾಕರ್ಲ ಸುಧಾಕರ, ವೇಣುಗೋಪಾಲ, ಎಸ್.ಸುರೇಶ್, ಉಡೇಗೋಳ್ ವೆಂಕಟೇಶ್ ಇತರರಿದ್ದರು.