ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರಾವಣ ಪುರಾಣ ಸಂಭ್ರಮ

Kampli sangatraya pathashala
ಕಂಪ್ಲಿ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಪುರಾಣ ಭವನದ ಹೊರನೋಟ.
Published on

ಕಂಪ್ಲಿ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಪುರಾಣ ಭವನದ ಹೊರನೋಟ.

ಕಂಪ್ಲಿ: ಶ್ರಾವಣ ನಿಮಿತ್ತ ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಆ.5 ರಿಂದ ಸೆ.4ರವರೆಗೆ ಪವಾಡಪುರುಷ ಎಮ್ಮಿಗನೂರು ಶ್ರೀ ಜಡಿಸಿದ್ಧ ಶಿವಯೋಗಿಗಳ ಲೀಲಾಮೃತ ಪುರಾಣ ಜರುಗಲಿದೆ. ಕಳೆದ 61 ವರ್ಷಗಳಿಂದ ಪುರಾಣ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಹೆಗ್ಗಳಿಕೆ ಪಾಠಶಾಲೆ ಹೊಂದಿದೆ.

ಸೋಮವಾರ (ಆ.5) ಬೆಳಗ್ಗೆ 10.25ಕ್ಕೆ ಬುಕ್ಕಸಾಗರದ ವಿಶ್ವಾರಾಧ್ಯ ಶಿವಾಚಾರ್ಯರು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಲಿದ್ದು, ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಹೊಸಪೇಟೆ ಕೊಟ್ಟೂರುಮಠದ ಜಗದ್ಗುರು ಬಸವಲಿಂಗ ಸ್ವಾಮೀಜಿ, ಹೆಬ್ಬಾಳದ ನಾಗಭೂಷಣ ಶಿವಾಚಾರ್ಯರು, ಎಮ್ಮಿಗನೂರು ಹಂಪಿ ಸಾವಿರ ದೇವರಮಠದ ವಾಮದೇವ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದಾರೆ. ಸಂಜೆ 6.30ಕ್ಕೆ ಗುಡುದೂರಿನ ನೀಲಕಂಠ ತಾತ ಪುರಾಣಕ್ಕೆ ಚಾಲನೆ ನೀಡಲಿದ್ದಾರೆ. ಶ್ರಾವಣ ಮಾಸಪೂರ್ತಿ ನಂ.10 ಮುದ್ದಾಪುರದ ಎಂ.ಶರಣಯ್ಯಶಾಸ್ತ್ರಿ ಪುರಾಣ ಪ್ರಸ್ತುತಪಡಿಸಲಿದ್ದು, ರಾರಾವಿಯ ಬಿ.ಚಿದಾನಂದಪ್ಪ ಗವಾಯಿ ಸಂಗೀತ, ಕನ್ನಡ ವಿವಿಯ ಕೆ.ದೊಡ್ಡಬಸಪ್ಪ ತಬಲ ಸಾಥ್ ನೀಡಲಿದ್ದಾರೆ. ಕೊನೇ ದಿನವಾದ ಸೆ.4ರಂದು ನಸುಕಿನ ಜಾವ ನಂದಿ, ಈಶ್ವರ, ಗುರುಸಿದ್ಧ ಮರಿದೇವರು, ಬೊಚ್ಚಯ್ಯ ಸ್ವಾಮಿಗಳ ಕರ್ತೃಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಜರುಗಲಿದೆ. ಬೆಳಗ್ಗೆ 8ಗಂಟೆಗೆ ಎಮ್ಮಿಗನೂರು ಜಡಿಸಿದ್ಧ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ, ಮಧ್ಯಾಹ್ನ 2 ಗಂಟೆಗೆ ಜಂಗಮ ಗಣಾರಾಧನೆ, ಮಹಾಪ್ರಸಾದ, ಸಂಜೆ 6.30ಕ್ಕೆ ಪುರಾಣ ಮಹಾಮಂಗಳಗೊಳ್ಳಲಿದೆ.

ಪಾಠಶಾಲೆ, ಪುರಾಣ ಇತಿಹಾಸ: 17ನೇ ಶತಮಾನದ ಉತ್ತರಾರ್ಧದಲ್ಲಿ ಕೊಡಗು ಸಂಸ್ಥಾನದಲ್ಲಿ ಜನಿಸಿದ ಬೊಚ್ಚಯ್ಯಸ್ವಾಮಿಗಳು, 18ನೇ ಶತಮಾನದಲ್ಲಿ ಧರ್ಮಜಾಗೃತಿಗಾಗಿ ತತ್ವೋಪದೇಶ ನೀಡುತ್ತ ಹಂಪಿಗೆ ಆಗಮಿಸಿ ನೆಲೆ ನಿಂತರು. ನಂತರ 1820ರ ಸುಮಾರಿಗೆ ಕಂಪ್ಲಿ ಪಟ್ಟಣಕ್ಕೆ ಬಂದು, ಸಂಸ್ಕೃತ, ವೈದಿಕ, ಜ್ಯೋತಿಷ್ಯ, ಸಂಗೀತ, ಶಿವತತ್ವೋಪದೇಶ ಹಾಗೂ ವೀರ ಮಹೇಶ್ವರರಿಗೆ ಧರ್ಮ ಸಂಸ್ಕಾರ ಶಿಕ್ಷಣ ನೀಡಲಿಕ್ಕಾಗಿ 1821ರಲ್ಲಿ ‘ಶಿವಯೋಗ ಮಂದಿರ’ ಪಾಠಶಾಲೆ ಸ್ಥಾಪಿಸಿದರು.

1830ರಲ್ಲಿ ಲಿಂಗೈಕ್ಯರಾದರು. ತದನಂತರ 1914ರಲ್ಲಿ ಕಂಪ್ಲಿ ಕಲ್ಮಠದ ಗುರುಸಿದ್ಧ ಮರಿದೇವರು ಕಟ್ಟುನಿಟ್ಟಾಗಿ ಶಿವಯೋಗ ಮಂದಿರದ ಚಟುವಟಿಕೆಗಳು ನಿರಂತರ ಜರುಗಲಿ ಎನ್ನುವ ಸದುದ್ದೇಶದಿಂದ ‘ಸಾಂಗತ್ರಯ ಸಂಸ್ಕೃತ ಪಾಠಶಾಲೆ’ಎಂದು ಮರುನಾಮಕರಣ ಮಾಡಿದರು. ಶಿವ ತತ್ವಶಿಕ್ಷಣ ಪ್ರಸಾರಕ್ಕಾಗಿ 1942ರಲ್ಲಿ 15 ಅಂಕಣಗಳ ಪುರಾಣ ಭವನ(ಶಿಲಾಮಂಟಪ), 1945ರಲ್ಲಿ 15 ಅಂಕಣಗಳ ಕಲ್ಯಾಣ ಭವನ ನಿರ್ಮಿಸಲಾಯಿತು. ಕಂಪ್ಲಿಯ ಶಿವಾನಂದಾಶ್ರಮದ ಓದ್ಸೋ ಕರಿಬಸಯ್ಯನವರು 1962ರಲ್ಲಿ ಪಟ್ಟಣದಲ್ಲಿ ಪುರಾಣ ಹೇಳಿಸುವ ಸಂಸ್ಕೃತಿಗೆ ಬುನಾದಿ ಹಾಕಿದರು. 1982ರಿಂದ ವೀರಶೈವ ಸಮಾಜದಿಂದ ಪುರಾಣ ಹೇಳಿಸುವ ಪರಿಪಾಠ ಮುಂದುವರಿದಿದೆ. ಸದ್ಯ ಪಾಠಶಾಲೆ ಅಧ್ಯಕ್ಷರಾಗಿ ಇಟಗಿ ಬಸವರಾಜಗೌಡ, ಪದಾಧಿಕಾರಿಗಳಾದ ಅಲಬನೂರು ಬಸವರಾಜ, ಬಿ.ಎಚ್.ಶಶಿಧರಗೌಡ, ಗಂಡಿ ಗಣೇಶ, ಟಿ.ಸುರೇಶಗೌಡ, ಅರವಿ ಅಮರೇಶಗೌಡ ಮತ್ತು ನಿರ್ದೇಶಕರು, ಸಲಹಾ ಸಮಿತಿ ಸದಸ್ಯರ ಉಸ್ತುವಾರಿಯಲ್ಲಿ ಪುರಾಣ ಜರುಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net