

ಕಂಪ್ಲಿ: ವಿದ್ಯಾರ್ಥಿಹಂತದಲ್ಲೇ ಮಕ್ಕಳಲ್ಲಿ ವೈಜ್ಞಾನಿಕ, ವೈಚಾರಿಕ ಮನೋಭಾವನೆಗಳನ್ನು ಪ್ರೇರೇಪಿಸುವಲ್ಲಿ ಶಿಕ್ಷಕರು ಜಾಗೃತಿ ತೋರಬೇಕು ಎಂದು ಸಿಆರ್‌ಪಿ ರೇಣುಕಾರಾಧ್ಯ ಹೇಳಿದರು.
ಇಲ್ಲಿನ ಸಾಹಿತಿ ವಿದ್ಯಾಲಯದ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ವಿಜ್ಞಾನ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ಪಠ್ಯದೊಂದಿಗೆ ವೈಚಾರಿಕ, ನೈತಿಕ ವಿಚಾರಗಳತ್ತ ವಿದ್ಯಾರ್ಥಿಗಳ ಗಮನ ಸೆಳೆಯಬೇಕು. ವಿಜ್ಞಾನ, ತಂತ್ರಜ್ಞಾನದ ಮಹತ್ವವನ್ನು ತಿಳಿಸಿ ಜಾಗೃತಿಗೊಳಿಸಬೇಕು ಎಂದರು.
ಆಡಳಿತ ಮಂಡಳಿ ಕಾರ್ಯದರ್ಶಿ ಸ್ವಪ್ನ ಉದಯಶಂಕರ್ ಮಾತನಾಡಿ, ಶೂನ್ಯ ವೆಚ್ಚದಲ್ಲಿ ಬೀಸಾಡಬಹುದಾದ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ವಿಜ್ಞಾನ ವಸ್ತುಗಳನ್ನು ತಯಾರಿಸುವ ಕರಕುಶಲ ಕಲೆಯನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ಕಲಿಸಬೇಕು. ಪಠ್ಯದಲ್ಲಿನ ವೈಜ್ಞಾನಿಕ ವಿಷಯಗಳನ್ನು ಪ್ರಾಯೋಗಿಕವಾಗಿ ತೋರಿಸಲು ಅಂತರ್ಜಾಲದ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ವಿದ್ಯಾಲಯದ ಪ್ರಾಥಮಿಕ, ಪ್ರೌಢಶಾಲೆಯ ವಿದ್ಯಾರ್ಥಿಗಳು 140ಕ್ಕೂ ಹೆಚ್ಚು ವಿಜ್ಞಾನ ವಸ್ತುಗಳನ್ನು ತಯಾರಿಸಿ, ಮಾಹಿತಿಯೊಂದಿಗೆ ಪ್ರದರ್ಶಿಸಿದರು. ವಿಜ್ಞಾನ ಸೌರ‌್ಯವ್ಯೆಹ, ನೀರು ಶುದ್ಧೀಕರಣ, ಮಳೆನೀರಿನ ಕೊಯ್ಲು, ಮಳೆನೀರು ಮರುಪೂರಣ, ಮಳೆಮುನ್ಸೂಚನೆ ಶೋಧ, ಆಮ್ಲೀಯಮಳೆ, ಡೋರ್‌ಡಿಟೆಕ್ಟರ್, ಚಿಲ್ಲಿ ಕಟರ್, ವ್ಯಾಕ್ಯೂಮ್ ಕ್ಲೀನರ್ ಒಳಗೊಂಡಂತೆ ನಾನಾ ಆಕರ್ಷಕ ಮಾದರಿಗಳನ್ನು ಪ್ರದರ್ಶಿತವಾದವು.
ಮುಖ್ಯಶಿಕ್ಷಕ ದೊಡ್ಡಬಸಯ್ಯ, ಶಿಕ್ಷಕರಾದ ಪಂಪನಗೌಡ, ಶರಣಬಸವ, ಎಚ್.ಎಂ.ದೇವಿ, ಶಿಲ್ಪಾಚಂದ್ರಿಕಾ, ಶ್ವೇತಾ, ಸೌಮ್ಯಾ, ಸುಮಾ, ಶೋಭಾ, ರುಕ್ಸಾನಾ, ಸಾನಿಯಾ ಇತರರಿದ್ದರು.