

ಕಂಪ್ಲಿ: ನಾರಿಹಳ್ಳದ ನೀರು ಮತ್ತು ತುಂಗಭದ್ರಾ ನದಿಯ ಹಿನ್ನಿರು ಗದ್ದೆಗೆ ನುಗ್ಗಿ ಭತ್ತ ಬೆಳೆ ಸಂಪೂರ್ಣ ಕೊಳೆತು ಹೋಗಿದ್ದಲ್ಲದೆ, ಗದ್ದೆ ಪೂರ್ಣ ಮರಳು ನುಗ್ಗಿ ನಿಂತಿದೆ. ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಟಗಿ ಗ್ರಾಮ ಹೊರವಲಯದ ನಾರಿಹಳ್ಳ ಸೇತುವೆ ಪಾತ್ರದ ಎಂಟತ್ತು ಎಕರೆ ಆಯಕಟ್ಟು ಪ್ರದೇಶದ ಭತ್ತ ಬೆಳೆ ನಾರಿಹಳ್ಳದ ಪ್ರವಾಹಕ್ಕೀಡಾಗಿದೆ.
2022ರ ಜೂನ್ ಮೂರನೇ ವಾರದಲ್ಲಿ ಸೋನಾ ಮಸೂರಿ ಭತ್ತ ಬೆಳೆದಿದ್ದು, ಅ.15ರ ಹೊತ್ತಿಗೆ ಕೊಯ್ಲಗಬೇಕಿತ್ತು. ಎಕರೆಗೆ 30 ಸಾವಿರ ರೂ. ಖರ್ಚು ಮಾಡಿ ಬೆಳೆ ನಿರ್ವಹಿಸಲಾಗಿತ್ತು. ಕೆಲ ದಿನಗಳ ಹಿಂದೆ ಬಿದ್ದ ನಿರಂತರ ಮಳೆಗೆ ನಾರಿಹಳ್ಳಕ್ಕೆ ಬಂದ ಪ್ರವಾಹ ಮತ್ತು ತುಂಗಭದ್ರಾ ನದಿಗೆ ಹೆಚ್ಚನ ಪ್ರಮಾಣದ ನೀರು ಜಲಾಶಯದಿಂದ ಹರಿದು ಬಂದು ನಾರಿಹಳ್ಳಕ್ಕೆ ಹಿನ್ನೀರು ನುಗ್ಗಿದೆ. ಇದರಿಂದಾಗಿ ನಾರಿಹಳ್ಳ ಪಾತ್ರದ ಭತ್ತದ ಗದ್ದೆಗೆ ನುಗ್ಗಿದ ನೀರು ಮೂರ‌್ನಾಲ್ಕು ದಿನ ನಿಂತಿದೆ. ಇದರಿಂದಾಗಿ ಭತ್ತದ ಗದ್ದೆಗೆ ಮರಳು ಹರಿದು ಭತ್ತ ಬೆಳೆ ಸಂಪೂರ್ಣ ಕೊಳೆತು ಹೋಗಿದೆ. ಎಚ್.ವೆಂಕಟೇಶ್ವರಲು, ವೆಂಕಟಸ್ವಾಮಿ, ಸೋಮಿರೆಡ್ಡಿ ಮೊದಲಾದ ರೈತರ ಸುಮಾರು ಎಂಟತ್ತು ಎಕರೆಯಷ್ಟು ಭತ್ತ ಬೆಳೆ ಹಾಳಾಗಿದೆ.
ಭತ್ತದ ಗದ್ದೆಗೆ ನೀರು ನುಗ್ಗಿ ಮರಳು ನಿಂತು ಎರಡು ಎಕರೆ ಭತ್ತ ಬೆಳೆ ಸಂಪೂರ್ಣ ನಷ್ಟಗೊಂಡಿದೆ. ಗದ್ದೆಗಳಲ್ಲಿ ಕುಣಿಗಳು ಬಿದ್ದಿವೆ. ಅಪಾರ ಪ್ರಮಾಣದ ಮರಳು ನಿಂತಿದೆ. ಇದೆಲ್ಲವನ್ನು ತೆರವುಗೊಳಿಸಿ, ಭೂಮಿ ಸಮತಟ್ಟುಗೊಳಿಸಿ ಮತ್ತು ಬೆಳೆ ಬೆಳೆಯಲು ಸಿದ್ದಮಾಡಿಕೊಳ್ಳಲು ಸಾವಿರಾರು ರೂ. ಖರ್ಚಾಗುತ್ತದೆ. ಕೃಷಿ ಇಲಾಖೆ ವಿಶೇಷ ಪ್ರಕರಣವೆಂದು ಪರಿಗಣಿಸಿ ನಷ್ಟ ಪರಿಹಾರ ಒದಗಿಸಿಕೊಡಬೇಕು.| ಹೂವಾಡಿ ವೆಂಕಟೇಶ್ವರಲು, ರೈತ, ನಂ.2 ಮುದ್ದಾಪುರ.ಮಳೆ ಮತ್ತು ನಾರಿಹಳ್ಳದ ಪ್ರವಾಹಕ್ಕೆ ಸುಮಾರು 61 ಹೆಕ್ಟರ್‌ನಷ್ಟು ಭತ್ತ ಬೆಳೆ ಜಲಾವೃತಗೊಂಡಿದೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.| ಗೌಸಿಯಾಬೇಗಂ, ತಹಸೀಲ್ದಾರ್, ಕಂಪ್ಲಿ.