ಪ್ರಯಾಣಿಕರಿಗಾಗಿ ಸಜ್ಜಾಗುತ್ತಿದೆ ಪುನೀತ್ ರಾಜಕುಮಾರ್ ಬಸ್ ತಂಗುದಾಣ

150922 Kampli Punith Busstand
Published on

ಕಂಪ್ಲಿ: ಬಿಸಿಲು, ಮಳೆ, ಚಳಿ, ಗಾಳಿಯಲ್ಲಿ ನಿಂತು ಬಸ್ಸಿಗಾಗಿ ಕಾಯುವ ಪ್ರಯಾಣಿಕರ ಪಾಡು ನೋಡದೆ ಹಳೆಯ ಬಸ್‌ನಿಲ್ದಾಣ ಬಳಿಯ ಸೋಮಪ್ಪ ಕೆರೆ ದಡದಲ್ಲಿ ಸ್ವಂತ ವೆಚ್ಚದಲ್ಲಿ ಜೈನ ಸಮುದಾಯದವರು ಬಸ್ ತಂಗುದಾಣ ನಿರ್ಮಿಸುತ್ತಿದ್ದಾರೆ. ಹಳೆಯ ಬಸ್ ನಿಲ್ದಾಣದೊಳಗೆ ಗಂಗಾವತಿ, ಹೊಸಪೇಟೆ ಕಡೆಗೆ ಹೋಗುವ ಬಸ್ಸು ನಿಲ್ಲುವ ವ್ಯವಸ್ಥೆ ಇಲ್ಲದಿದ್ದರಿಂದ ಅಂಬೇಡ್ಕರ್ ವೃತ್ತ ಬಳಿ, ಸೋಮಪ್ಪ ಕೆರೆ ದಡ ಮತ್ತು ಅದರ ಎದುರುಗಡೆ ಪ್ರಯಾಣಿಕರು ನಿಲ್ಲುತ್ತಿದ್ದಾರೆ. ಪ್ರಯಾಣಿಕರಿಗೆ ಯಾವುದೇ ನೆರಳಿನ ವ್ಯವಸ್ಥೆ ಇಲ್ಲ. ಪ್ರಯಾಣಿಕರ ಈ ಪಾಡನ್ನು ಗಮನಿಸಿದ ಶ್ರೀ ಜೈನ್ ಸೇವಾ ಟ್ರಸ್ಟ್‌ನಿಂದ ಸುಮಾರು 2.50 ಲಕ್ಷ ರೂ. ವೆಚ್ಚದಲ್ಲಿ 20/ 15ಅಡಿಗಳ ಉದ್ದಗಲದಲ್ಲಿ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಬಸ್ ತಂಗುದಾಣ ನಿರ್ಮಿಸುತ್ತಿದ್ದಾರೆ.

ಬೆನ್ನಿಗಾಸರೆ ಇರುವ 16 ಸೇರಿದಂತೆ 28 ಗ್ರಾನೈಟ್ ಆಸನಗಳಿವೆ. ಹಿಂಬದಿಯಲ್ಲಿ ಭಾರತಮಾತೆ ಚಿತ್ರ, ಅಕ್ಕಪಕ್ಕಗಳಲ್ಲಿ ಕಂಪ್ಲಿ ಕೋಟೆ, ಪೇಟೆಬಸವೇಶ್ವರ ನೀಲಮ್ಮನವರ ಜೋಡಿ ತೇರು ಚಿತ್ರಗಳುಳ್ಳ ಸೈನಿಂಗ್ ಬೋರ್ಡ್ ಅಳವಡಿಕೆಯೊಂದಿಗೆ ಆಕರ್ಷಕ ವಿದ್ಯುತ್‌ದೀಪ ವ್ಯವಸ್ಥೆ ಇದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸುಸಜ್ಜಿತ ಬಸ್‌ತಂಗುದಾಣ ನಿರ್ಮಿಸುತ್ತಿದ್ದು ಶೀಘ್ರದಲ್ಲಿಯೇ ಪ್ರಯಾಣಿಕರ ಉಪಯೋಗಕ್ಕೆ ಒದಗಿಸಲಾಗುವುದು. ಇದರ ಎದುರುಗಡೆಯಲ್ಲೂ ಬಸ್‌ತಂಗುದಾಣ ನಿರ್ಮಿಸುವ ಯೋಜನೆಯಿದೆ. ಸಾರ್ವಜನಿಕರು ಬಸ್‌ತಂಗುದಾಣವನ್ನು ಸುರಕ್ಷತೆಯಿಂದ ಕಾಯ್ದುಕೊಂಡು ಹೋಗಬೇಕಿದೆ ಎಂದು ಶ್ರೀ ಜೈನ್ ಸೇವಾ ಟ್ರಸ್ಟ್ ಅಧ್ಯಕ್ಷ ಶಾಂತಿಲಾಲ್ ಸಿಂಘ್ವಿ, ಪದಾಧಿಕಾರಿಗಳಾದ ನವೀನ್ ಬಾಗ್ರೇಚಾ, ರಾಜು ಜೈನ್, ರಮೇಶ್ ಇವರ ಆಶಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net