

ಕಂಪ್ಲಿ: ತ್ಯಾಗವೇ ನಿಜವಾದ ಧರ್ಮ. ಆಸ್ತಿ ಅಧಿಕಾರಕ್ಕಾಗಿ ಸಹೋದರರು ತ್ಯಾಗ ಮನೋಭಾವ ತೋರುವುದೇ ರಾಮಾಯಣದ ಆದರ್ಶ ಎಂದು ಹರಿಹರದ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ಬಾಳೆಕಾಯಿ ಕೆಂಚಪ್ಪ ವೇದಿಕೆಯಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಗುರುವಾರ ಮಾತನಾಡಿದರು. ವಾಲ್ಮೀಕಿ ರಾಮಾಯಣವು ಮಾನವ ಸಂಬಂಧಗಳನ್ನು ಗಟ್ಟಿಗೊಳ್ಳಿಸುತ್ತದೆ. ವಾಲ್ಮೀಕಿ ತಳವಾರ, ಪರಿವಾರದವರಿಗೆ ನೀಡಿದ ಎಸ್ಟಿ ಪ್ರಮಾಣಪತ್ರವನ್ನು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಬೇರೆ ಜಾತಿಯವರು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಪಟಾಕಿ ಸುಡುವ ಬದಲಿಗೆ ಮಠಕ್ಕೆ ಪಟಾಕಿ ಹಣ ನೀಡಿ, ಡಿಜೆ ಕುಣಿತ, ಮದ್ಯವ್ಯಸನದಿಂದ ಯುವಕರು ಮುಕ್ತರಾಗಬೇಕು ಎಂದು ಸಲಹೆ ನೀಡಿದರು.
ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ. ವಾಲ್ಮೀಕಿ ಸಮುದಾಯ ಭವನದ ವಿಸ್ತರಣೆಗೆ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದರು.
ಕನ್ನಡ ವಿವಿ ಪ್ರಾಧ್ಯಾಪಕ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಉಪನ್ಯಾಸ ನೀಡಿದರು. ತಹಸೀಲ್ದಾರ್ ಎಸ್.ಶಿವರಾಜ, ಪ್ರಮುಖರಾದ ಕೆ.ಶ್ರೀನಿವಾಸರಾವ್, ಬಿ.ನಾರಾಯಣಪ್ಪ, ಡಾ.ವೆಂಕಟೇಶ, ಎನ್.ರಾಮಾಂಜನೇಯಲು, ಪಿ.ವೀರೇಶ, ದ್ಯಾಮನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಕರೆಂಟ್ ಗೋಪಾಲಪ್ಪ, ಕಗ್ಗಲ್ ವೀರೇಶಪ್ಪ, ಎ.ಹುಲುಗಪ್ಪ, ಬಿ.ಲಕ್ಷ್ಮಣ, ವಾಲ್ಮೀಕಿ ಈರಣ್ಣ, ವಾಲ್ಮೀಕಿ ರಘು, ಗೋವಿಂದಪ್ಪ, ಪಿ.ಬ್ರಹ್ಮಯ್ಯ, ಬಿ.ವೆಂಕಟೇಶ, ನೀರಗಂಟಿ ವೀರೇಶ, ವಿ.ಮರಿಲಿಂಗಪ್ಪ, ಬಿ.ಅಂಬಣ್ಣ, ಪೈಲ್ವಾನ್ ವೀರೇಶ ಇತರರಿದ್ದರು.
ಇದಕ್ಕೂ ಮುನ್ನ ಉದ್ಭವ ಮಹಾಗಣಪತಿ ಗುಡಿಯಿಂದ ವಾಲ್ಮೀಕಿ ಮಹರ್ಷಿ ಭಾವಚಿತ್ರ, ವಾಲ್ಮೀಕಿ ಜಗದ್ಗುರುಗಳ ಮೆರವಣಿಗೆ ನಡೆಯಿತು. ಮಕ್ಕಳು ಲವ-ಕುಶ, ರಾಮ, ಲಕ್ಷ್ಮಣ ಛದ್ಮವೇಷಧರಿಸಿ ಗಮನ ಸಳೆದರು.