

ಕಂಪ್ಲಿ: ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವಲ್ಲಿ ರೈತರು ಜಾಗೃತರಾಗಬೇಕು. ಈ ಕುರಿತು ಪಿಎಂ ಕಿಸಾನ್ ಸಮೃದ್ಧಿ ಕೇಂದ್ರದಲ್ಲಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಬಳ್ಳಾರಿಯ ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಕಂಪನಿಯ ನಿವೃತ್ತ ಮಾರುಕಟ್ಟೆ ಅಧಿಕಾರಿ ಜಿ.ಎಂ.ಗುರುಲಿಂಗಪ್ಪ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮೃದ್ಧಿ ಕೇಂದ್ರ ಚಾಲನೆಗೊಳಿಸಿದ ಹಿನ್ನಲೆಯಲ್ಲಿ ಪಟ್ಟಣದ ವಿಕೆಟಿ ರಸಗೊಬ್ಬರ ಅಂಗಡಿಯಲ್ಲಿ ಗುರುವಾರ ಏರ್ಪಡಿಸಿದ್ದ ರೈತರ ಜಾಗೃತಿ ಸಭೆಯಲ್ಲಿ ಮಾತನಾಡಿದರು. ರೈತರ ನೆರವಿಗಾಗಿ ಪ್ರಧಾನಿ ಅವರು ದೇಶದ್ಯಾಂತ 1.25 ಲಕ್ಷ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಆರಂಭಿಸಿದ್ದಾರೆ.
ಪಟ್ಟಣದಲ್ಲಿಯೂ ಕೇಂದ್ರಕ್ಕೆ ಚಾಲನೆ ದೊರೆತಿದ್ದು, ಇಲ್ಲಿ ಕೃಷಿಯ ಆಧುನಿಕ ತಂತ್ರಜ್ಞಾನ ಮಾಹಿತಿ, ಡ್ರೋನ್ ಮೂಲಕ ಔಷಧ ಸಿಂಪಡಣೆ ಸೇರಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಮಣ್ಣು ಪರೀಕ್ಷೆಗಾಗಿ ರೈತರು ಮಣ್ಣನ್ನು ನೀಡಿದಲ್ಲಿ ಕೋಲಾರ್, ಕಲಬುರಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು. ಭೂಮಿಯಲ್ಲಿ ಗಂಧಕ ಅಂಶದ ಕೊರತೆ ನೀಗಿಸಲು ಗಂಧಕ ಲೇಪಿತ ಯೂರಿಯಾ ಗೊಬ್ಬರ ಬಳಸುವಲ್ಲಿ ರೈತರು ಮುಂದಾಗಬೇಕು ಎಂದರು.
ಆರ್‌ಸಿಎಫ್ ಬಳ್ಳಾರಿ ಘಟಕದ ಉಪ ವ್ಯವಸ್ಥಾಪಕ ವಿಶಾಲ್ ಮಾಂಜ್ರೆಕರ್, ವಿಕೆಟಿ ಅಂಗಡಿ ಮಾಲೀಕ ಡಿ.ವಿ.ಸುಬ್ಬಾರಾವ್, ಪ್ರಮುಖರಾದ ಡಿ.ವಿ.ರಮೇಶಗುಪ್ತ, ಜಿ.ಶ್ರೀನಿವಾಸುಲು, ಜೋರಾವರ್‌ಮಲ್, ರಾಕೇಶ್‌ಜೈನ್, ರೈತರಾದ ರಾಮು, ಪದ್ಮನಾಭ, ಮಹೇಶ್ ಇತರರಿದ್ದರು.