ಜನರಿಗೆ ಶುದ್ಧ ಕುಡಿವ ನೀರು ಪೂರೈಸಿ

Kampli Police Accept application from public
ಕಂಪ್ಲಿಯಲ್ಲಿ ಬಳ್ಳಾರಿ ಲೋಕಾಯುಕ್ತ ಪಿಎಸ್‌ಐ ಮಹಮ್ಮದ್ ರಫಿಕ್ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು.
Published on

ಕಂಪ್ಲಿ: ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಶುದ್ಧ ನೀರು ಪೂರೈಕೆಗೆ ಸ್ಥಳೀಯ ಆಡಳಿತ ಮುತುವರ್ಜಿ ವಹಿಸಬೇಕು ಎಂದು ಬಳ್ಳಾರಿಯ ಲೋಕಾಯುಕ್ತ ಪಿಎಸ್‌ಐ ಮಹಮ್ಮದ್ ರಫಿಕ್ ಸೂಚಿಸಿದರು.

ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶುದ್ಧ ಕುಡಿವ ನೀರು ಒದಗಿಸಲು ಪುರಸಭೆ, ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬಿತ್ತನೆ ಕಾರ್ಯ ಆರಂಭವಾಗುವುದರಿಂದ ಬೀಜ, ಗೊಬ್ಬರ ಕೊರತೆ ಆಗದಂತೆ ಕೃಷಿ ಅಧಿಕಾರಿಗಳು ನೋಡಿಕೊಳ್ಳಬೇಕು. ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.

ಬಳ್ಳಾಪುರದ ರೈತ ಎಂ.ಎಂ.ಬಸವರಾಜ ಮಾತನಾಡಿ, ಗ್ಲೈಫೋಸೇಟ್ ಅಂಶವುಳ್ಳ ಕಳೆನಾಶಕ ಕ್ಯಾನ್ಸರ್‌ಕಾರಕ ಆಗಿದ್ದು ರೈತರು ಬಳಸದಂತೆ ಕೃಷಿ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದರು. ಇದಕ್ಕೆ ಕೃಷಿ ಅಧಿಕಾರಿ ಶ್ರೀಧರ್ ಪ್ರತಿಕ್ರಿಯಿಸಿ, ಗ್ಲೈಫೋಸೇಟ್ ಅಂಶವುಳ್ಳ ಕಳೆನಾಶಕ ಬೀಳು ಹೊಲದಲ್ಲಿ ಮಾತ್ರ ಬಳಸುವಂತೆ ಹಾಗೂ ಬೆಳೆಯಿಲ್ಲದ ಪ್ರದೇಶದಲ್ಲಿ ಮಾತ್ರ ನಿರ್ಬಂಧಿತವಾಗಿ ಉಪಯೋಗಿಸುವಂತೆ ಸರ್ಕಾರದ ಮಾರ್ಗಸೂಚಿಯಾಗಿದ್ದು, ರೈತರು ವಿವೇಚನೆಯಿಂದ ಬಳಸಬೇಕಿದೆ ಎಂದರು.

ಬಿಇಒ ಚನ್ನಬಸಪ್ಪ ಮಗ್ಗದ ಮಾತನಾಡಿ, ತಾಲೂಕಿನಲ್ಲಿ ಒಟ್ಟು 423 ತರಗತಿ ಕೊಠಡಿಗಳಿದ್ದು, ಈ ಪೈಕಿ 84 ದುರಸ್ತಿಗೊಳ್ಳಬೇಕಿದೆ. 70 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. 80 ಹೊಸ ಕೋಣೆಗಳ ಅಗತ್ಯವಿದೆ. 80 ಬಾಲಕರು, 88 ಬಾಲಕಿಯರ ಶೌಚಗೃಹಗಳ ಅಗತ್ಯವಿದೆ. ಒಟ್ಟಾರೆ ಶಾಲೆಗಳಲ್ಲಿ 5,325ಮೀ. ಆವರಣಗೋಡೆ ಲಭ್ಯವಿದೆ. ಇದರಲ್ಲಿ 1,268 ಮೀ. ಶಿಥಿಲಗೊಂಡಿದೆ. ಒಟ್ಟು 1,665ಮೀ.ಆವರಣ ಗೋಡೆ ನಿರ್ಮಾಣ ಅಗತ್ಯವಿದ್ದು, ಪ್ರಸ್ತಾವನೆ ಸಲ್ಲಿಸಿದೆ ಎಂದು ಮಾಹಿತಿ ನೀಡಿದರು.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಸಾರ್ವಜನಿಕರು ಮಧ್ಯವರ್ತಿಗಳ ಮೊರೆ ಹೋಗಿ ಹಣ ಕಳೆದುಕೊಳ್ಳಬಾರದು ಎಂದು ಸಿಡಿಪಿಒ ಜಿ.ಪ್ರದೀಪ್ ತಿಳಿಸಿದರು. ಆರ್‌ಡಿಪಿಆರ್ ಇಲಾಖೆ ಒಂದು, ಸರ್ವೇ ಇಲಾಖೆಗೆ ಸೇರಿದ ಮೂರು ಅರ್ಜಿ ಸ್ವೀಕರಿಸಲಾಯಿತು. ಪುರಸಭೆ ಸಿಒ ಡಾ.ಎನ್.ಶಿವಲಿಂಗಪ್ಪ, ಪಿಎಸ್‌ಐ ವಿಜಯಪ್ರತಾಪ್ ಎಸ್.ಪಾಟೀಲ್ ಇದ್ದರು.

ಅಧಿಕಾರಿಗಳು ಮತ್ತು ಸಾರ್ವಜನಿಕರ ಮಧ್ಯೆ ಲೋಕಾಯುಕ್ತ ಪೊಲೀಸರು ಸೇತುವೆಯಂತೆ ಕಾರ್ಯನಿರ್ವಹಿಸುತ್ತಾರೆ. ಜನರ ಕೆಲಸಗಳನ್ನು ಅಧಿಕಾರಿಗಳು ಸಕಾಲದಲ್ಲಿ ಮಾಡಿಕೊಡುವುದರ ಜತೆಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು.| ಗೌಸಿಯಾ ಬೇಗಂ, ತಹಸೀಲ್ದಾರ್, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net