

ಕಂಪ್ಲಿ: ಪಟ್ಟಣದಲ್ಲಿ ಶಾಶ್ವತ ಭತ್ತ ಖರೀದಿ ಕೇಂದ್ರ ತೆರೆಯುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ (ಜೆ.ಕಾರ್ತಿಕ ಬಣ) ತಾಲೂಕು ಘಟಕ ಸೋಮವಾರ ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ತಾಲೂಕಿನಲ್ಲಿ 20 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಭತ್ತ ಕೊಯ್ಲು ಸಮಯದಲ್ಲಿ ದರ ಕುಸಿತಗೊಂಡು ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ. ಭತ್ತ ಖರೀದಿ ಕೇಂದ್ರ ಚಾಲ್ತಿಯಲ್ಲಿದ್ದರೆ ದರ ಉತ್ತಮವಾಗಿರುತ್ತದೆ. ಆದರೆ, ರೈತರು ಭತ್ತ ಮಾರಾಟ ಮಾಡಿದ ನಂತರ ಖರೀದಿ ಕೇಂದ್ರ ತೆರೆಯಲಾಗುತ್ತದೆ. ಇದರಿಂದ ರೈತರಿಗೆ ಉಪಯೋಗವಾಗುತ್ತಿಲ್ಲ. ಇದೀಗ ಭತ್ತ ಕೊಯ್ಲು ಆರಂಭಗೊಂಡಿದ್ದು ಜಿಲ್ಲಾಡಳಿತ ಮುತುವರ್ಜಿವಹಿಸಿ ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.
ಮೆಣಸಿನಕಾಯಿ ಬೆಳೆದ ರೈತರು ಬ್ಯಾಡಗಿ ಮಾರುಕಟ್ಟೆಗೆ ತೆರಳಬೇಕಿದ್ದು, ಸಾಗಣೆ ಸೇರಿ ವಿವಿಧ ವೆಚ್ಚ ಭರಿಸಿ ಹೈರಾಣಾಗುತ್ತಿದ್ದಾರೆ. ಆದ್ದರಿಂದ ಮೆಣಸಿನಕಾಯಿ ಮಾರುಕಟ್ಟೆ ಆರಂಭಿಸಬೇಕು. ಪಟ್ಟಣದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿ ಕಬ್ಬು ಬೆಳೆಯಲು ರೈತರಿಗೆ ಅನುಕೂಲ ಒದಗಿಸಬೇಕು ಎಂದು ಒತ್ತಾಯಿಸಿದರು.