ಭತ್ತ ಖರೀದಿ ನೋಂದಣಿ ಯಾವಾಗ?

batta
Published on

ಕಂಪ್ಲಿ: ಭತ್ತ ಕೊಯ್ಲು ಮುಗಿಯುತ್ತ ಬಂದರೂ ಖರೀದಿ ಕೇಂದ್ರ ಮರೀಚಿಕೆಯಂತಾಗಿದೆ. ನ.16ರಿಂದಲೇ ಆರಂಭವಾಗಬೇಕಿದ್ದ ನೋಂದಣಿ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ. ಕೆಲ ರೈತರು ನೋಂದಣಿಗಾಗಿ ಎಪಿಎಂಸಿಗೆ ಎಡತಾಕುತ್ತಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಎಲ್ಲ ಭತ್ತ ತಳಿಗಳ ದರ ನೆಲಕಚ್ಚಿದ್ದು, ಖರೀದಿ ಕೇಂದ್ರ ಆರಂಭಗೊಂಡಲ್ಲಿ ದರ ಹೆಚ್ಚಲಿದೆ ಅಥವಾ ಸರ್ಕಾರದ ಬೆಂಬಲ ಬೆಲೆಗೆ ಸ್ಥಿರಗೊಳ್ಳಲಿದೆ. 2024-25ನೇ ಸಾಲಿನ ಮುಂಗಾರು ಋತುವಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ 2024ರ ನ.16ರಂದೇ ನಡೆದಿದ್ದು, ಅಂದಿನಿಂದಲೇ ಭತ್ತ ಖರೀದಿ ನೋಂದಣಿಗೆ ತೀರ್ಮಾನಿಸಲಾಗಿದೆ.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಖರೀದಿ ಏಜೆನ್ಸಿ ಕಾರ್ಯವನ್ನು ವಹಿಸಿಕೊಂಡಿದ್ದು, ಬಳ್ಳಾರಿಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ನೋಡಲ್ ಅಧಿಕಾರಿಯಾಗಿದ್ದಾರೆ. ಸದ್ಯ ನೋಂದಣಿ ಮಾಡಿಕೊಂಡು 2025ರ ಜ.1 ರಿಂದ ಮಾ.31ರತನಕ ಭತ್ತ, ಜೋಳ ಖರೀದಿಗೊಳ್ಳಲಿದೆ. ಕ್ವಿಂಟಾಲ್‌ಗೆ ಭತ್ತ ಸಾಮಾನ್ಯ 2300 ರೂ., ಭತ್ತ ಗ್ರೇಡ್-ಎ 2320 ರೂ., ಬಿಳಿಜೋಳ ಹೈಬ್ರಿಡ್ 3371 ರೂ., ಬಿಳಿಜೋಳ ಮಾಲ್ದಂಡಿ 3421 ರೂ.ಗಳ ಬೆಂಬಲ ಬೆಲೆಗೆ ಕೊಳ್ಳಲಿದೆ.

ಕಂಪ್ಲಿ ತಾಲೂಕಿನಲ್ಲಿ ಅಂದಾಜು 17,559 ಹೆಕ್ಟೇರ್‌ನಲ್ಲಿ ಭತ್ತ ಬೆಳೆದಿದ್ದು, 1,10,621.7 ಮೆಟ್ರಿಕ್ ಟನ್‌ನಷ್ಟು ಉತ್ಪಾದನೆಯಾಗಿದೆ. 3196 ಹೆಕ್ಟೇರ್‌ನಲ್ಲಿ ಜೋಳ ಬೆಳೆದಿದ್ದು 4794 ಮೆಟ್ರಿಕ್‌ಟನ್‌ನಷ್ಟು ಜೋಳ ಉತ್ಪಾದನೆಗೊಂಡಿದೆ. ಇದರಲ್ಲಿ ಶೇ.50ರಷ್ಟಾದರೂ ಖರೀದಿ ಕೇಂದ್ರದಲ್ಲಿ ಮಾರಾಟಗೊಳ್ಳಬೇಕಿದೆ. ಖರೀದಿ ಕೇಂದ್ರ ವಿಳಂಬದಿಂದ ಕೆಲ ರೈತರು ಸಿಕ್ಕ ದರಕ್ಕೆ ಮಾರಾಟ ಮಾಡಿಕೊಂಡು ನಷ್ಟಕ್ಕೀಡಾಗಿದ್ದಾರೆ.

ಆದರೆ, ವಾರವಾದರೂ ಖರೀದಿ ನೋಂದಣಿ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲೇ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆದು, ಖರೀದಿ ಪ್ರಕ್ರಿಯೆ ಆಗಿನಿಂದಲೇ ಶುರುವಾಗಬೇಕು. ಜ.1ರತನಕ ರೈತರು ಭತ್ತ, ಜೋಳವನ್ನು ಎಲ್ಲಿ ಸಂಗ್ರಹ ಮಾಡಿ ಕಾಪಾಡಿಕೊಳ್ಳುವುದು ? ನೋಂದಣಿ ಜತೆಗೆ ಭತ್ತ ಖರೀದಿಸಲಿ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ, ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ, ನಗರ ಅಧ್ಯಕ್ಷ ತಿಮ್ಮಪ್ಪನಾಯಕ ಒತ್ತಾಯಿಸಿದ್ದಾರೆ.

ರೈತ ನೋಂದಾಯಿತ ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರುಟ್ಸ್ ಐಡಿ) ಅಪ್‌ಡೇಟ್ ಮಾಡಲಾಗುತ್ತಿದೆ. ಈ ಕೆಲಸ ಮುಗಿದ ನಂತರವೇ ಭಕ್ತ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. | ಸಂತೋಷ್ ಎಸ್.ಸಪ್ಪಂಡಿ ಭತ್ತ/ಜೋಳ ಖರೀದಿ ಕೇಂದ್ರದ ನೋಡಲ್ ಅಧಿಕಾರಿ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net