

ಕಂಪ್ಲಿ: ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಬೆಳೆದಿದ್ದ ಭತ್ತ ಬೆಳೆಯ ಕೊಯ್ಲು ಭರದಿಂದ ಸಾಗಿದೆ. ಭತ್ತದ ಇಳುವರಿ ಉತ್ತಮವಾಗಿದ್ದರೂ, ದರ ಕುಸಿತದಿಂದ ರೈತರಿಗೆ ಲಾಭದ ಭಾಗ್ಯ ದೊರೆಯದಂತಾಗಿದೆ.
ತಾಲೂಕಿನ 13,650 ಹೆಕ್ಟೇರ್ ಪ್ರದೇಶದಲ್ಲಿ ಬೇಸಿಗೆ ಹಂಗಾಮಿಗೆ ಗಂಗಾ ಕಾವೇರಿ, ಆರ್.ಎನ್.ಆರ್. ತಳಿಯ ಭತ್ತವನ್ನು ರೈತರು ಬೆಳೆದಿದ್ದಾರೆ. ಬೆಳಗೋಡ್‌ಹಾಳ್, ಸಣಾಪುರ, ಇಟಗಿ ಸೇರಿದಂತೆ ತುಂಗಭದ್ರಾ ನದಿಪಾತ್ರದ ಅಂದಾಜು ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸದ್ಯ ಭತ್ತದ ಕಟಾವು ಬಿರುಸಿನಿಂದ ನಡೆದಿದೆ.
ಮಾರುಕಟ್ಟೆಯಲ್ಲಿ 75 ಕೆ.ಜಿ. ಭತ್ತದ ಚೀಲಕ್ಕೆ ದರ ನಿಗದಿಪಡಿಸಲಾಗುತ್ತದೆ. 75 ಕೆ.ಜಿ. ಪರಿಗಣಿಸಿದರೆ ಪ್ರತಿ ಎಕರೆಗೆ 40 ರಿಂದ 48 ಚೀಲಗಳಷ್ಟು ಇಳುವರಿ ಈ ಬಾರಿ ಬಂದಿದೆ. ಗಂಗಾ ಕಾವೇರಿ ತಳಿಯ ಭತ್ತ 75 ಕೆ.ಜಿ. ಚೀಲಕ್ಕೆ 1,350 ರೂ. ಇದ್ದರೆ, ಆರ್.ಎನ್.ಆರ್ ತಳಿಯ ಭತ್ತಕ್ಕೆ 1,420 ರೂ. ದರ ಇದೆ. ಉತ್ತಮ ಇಳುವರಿ ಬಂದಿರುವ ಖುಷಿ ಒಂದೆಡೆಯಾದರೆ, ದರ ಕುಸಿತದ ದುಃಖ ಬೆಳೆಗಾರರಿಗೆ ಕಾಡುತ್ತಿದೆ.
ಭತ್ತ ಕಟಾವು ಮಾಡಲು ಯಂತ್ರಗಳ ಬಾಡಿಗೆ ಪ್ರತಿ ಗಂಟೆಗೆ 2500ದಿಂದ 2600 ರೂ. ಇದ್ದು, ಇದು ರೈತರಿಗೆ ಹೊರೆಯಾಗಿದೆ. ಜತೆಗೆ ಗುತ್ತಿಗೆ ಆಧಾರಿತ ಕೃಷಿಕರು ಎಕರೆಗೆ 15ರಿಂದ 18 ಚೀಲ ಭತ್ತ ಜಮೀನು ಮಾಲೀಕರಿಗೆ ನೀಡಬೇಕಿದೆ. ಈಗಾಗಲೇ ಬೆಳೆ ನಿರ್ವಹಣೆಗೆ ಸಾಕಷ್ಟು ಹಣ ವ್ಯಯಿಸಿದ್ದು, ದರ ಕುಸಿತ ರೈತರನ್ನು ನಷ್ಟದ ದವಡೆಗೆ ತಳ್ಳಿದೆ. ಕಟಾವು ಕಾರ್ಯ ಇನ್ನೂ ಬಾಕಿ ಇದ್ದು, ಮಳೆಯ ಆತಂಕ ಎದುರಾಗುವ ಸಾಧ್ಯತೆಗಳಿದೆ.
ಶಾಶ್ವತ ಖರೀದಿ ಕೇಂದ್ರ ಆರಂಭಿಸಲಿ
ಬೆಂಬಲ ಬೆಲೆ ಯೋಜನೆಯಡಿ ಶಾಶ್ವತವಾಗಿ ಭತ್ತ ಖರೀದಿ ಕೇಂದ್ರ ಆರಂಭಿಸಿದರೆ ದರ ನಿಯಂತ್ರಣದಲ್ಲಿರುತ್ತದೆ ಎಂಬುದು ರೈತರ ಅನಿಸಿಕೆಯಾಗಿದೆ. ಇದರಿಂದಾಗಿ ಶಾಶ್ವತವಾಗಿ ಭತ್ತ ಖರೀದಿ ಕೇಂದ್ರ ಆರಂಭಿಸುವುದರೊಂದಿಗೆ ಕೃಷಿ ಯಂತ್ರಧಾರೆ ಮೂಲಕ ಕಟಾವು ಯಂತ್ರಗಳನ್ನು ಒದಗಿಸಿದರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ, ರೈತ ಪ್ರಮುಖರಾದ ಆನಂದರೆಡ್ಡಿ, ಕೊಟ್ಟೂರು ರಮೇಶ, ವಿ.ವೀರೇಶ, ಕೆ.ಖಾಸಿಂಸಾಬ್, ಟಿ.ಗಂಗಣ್ಣ, ಮುರಾರಿ, ಆದೋನಿ ರಂಗಪ್ಪ ಅವರ ಒತ್ತಾಯವಾಗಿದೆ.
ಕೋಟ್: ಬೆಂಬಲ ಬೆಲೆ ಯೋಜನೆಯಡಿ ಭತ್ತದ ಶಾಶ್ವತ ಖರೀದಿ ಕೇಂದ್ರ ತೆರೆಯಬೇಕು. ಇದರಿಂದ ಮಾರುಕಟ್ಟೆಯಲ್ಲಿ ಭತ್ತದ ದರ ಕುಸಿತವಾಗುವುದಿಲ್ಲ. ಸರ್ಕಾರ ಈ ಬಗ್ಗೆ ಕಾಳಜಿ ತೋರಬೇಕು.
> ತಿಮ್ಮಪ್ಪ ನಾಯಕ
ರೈತ ಸಂಘ ಹಾಗೂ ಹಸಿರು ಸೇನೆ ನಗರ ಘಟಕದ ಅಧ್ಯಕ್ಷ, ಕಂಪ್ಲಿ
ಕೋಟ್: ರೈತರು ಸಮಗ್ರ ಬೆಳೆ ಪದ್ಧತಿ ಅನುಸರಿಸಬೇಕು. ಕೃಷಿಯೊಂದಿಗೆ ಪಶುಪಾಲನೆ, ಕೋಳಿ ಸಾಕಣೆಯಂಥ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯ
> ಕೆ.ಸೋಮಶೇಖರ
ಕೃಷಿ ಅಧಿಕಾರಿ, ಕಂಪ್ಲಿ