ನ್ಯಾಯಾಲಯಕ್ಕೆ ದೊರೆಯುತ್ತಿಲ್ಲ ಕಟ್ಟಡ

kmp-2
ಕಂಪ್ಲಿ ಮಾರುತಿನಗರದ ಉದ್ಯಾನದಲ್ಲಿರುವ ಕಟ್ಟಡ.
Published on

ಕಂಪ್ಲಿ: ಜೆಎಂಎಫ್ ನ್ಯಾಯಾಲಯ ಆರಂಭಕ್ಕೆ ಅನುಮತಿ ದೊರೆತು ಒಂದು ವರ್ಷ ಕಳೆದಿದ್ದು, ಬಾಡಿಗೆಗೂ ಕಟ್ಟಡ ಸಿಗದೆ ನ್ಯಾಯಾಲಯ ಆರಂಭ ವಿಳಂಬವಾಗುತ್ತಿದೆ.

ಪಟ್ಟಣದ ಐಬಿಯಲ್ಲಿ ತಾತ್ಕಾಲಿಕವಾಗಿ ಜೆಎಂಎಫ್ ನ್ಯಾಯಾಲಯ ಆರಂಭಿಸಲು ಹೈಕೋರ್ಟ್ ರಿಜಿಸ್ಟ್ರಾರ್ 2024ನೇ ಮೇ 30ರಂದು ಅದೇಶಿಸಿದ್ದರು.

ಇದಕ್ಕೆ ಕಲಬುರಗಿಯ ಪಿಡಬ್ಲುೃಡಿ ಅಧಿಕಾರಿಗಳು ವಿರೋಧಿಸಿದ್ದರಿಂದ ನ್ಯಾಯಾಲಯಕ್ಕೆ ಕಟ್ಟಡ ಸಿಗಲಿಲ್ಲ. ಈಗಾಗಲೇ ಸುಸಜ್ಜಿತ ಹೊಸ ಐಬಿ ಕಟ್ಟಡ ನಿರ್ಮಾಣವಾಗಿದ್ದರಿಂದ ಹಳೆಯ ಐಬಿ ಕಟ್ಟಡವನ್ನು ನ್ಯಾಯಾಲಯ ಆರಂಭಕ್ಕೆ ಒದಗಿಸುವಂತೆ ತಾಲೂಕಿನ ವಕೀಲರ ಬಳಗ, ಪಟ್ಟಣದ ಪ್ರಗತಿಪರ ಸಂಘಟನೆಗಳಿಂದ ಸಿಎಂ ಹಾಗೂ ಸಚಿವರು, ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪಿಡಬ್ಲುೃಡಿ ಇಲಾಖೆಯ ಸರ್ಕಾರದ ಆಧೀನ ಕಾರ್ಯದರ್ಶಿ ಒಪ್ಪುತ್ತಿಲ್ಲ.

ಮಾರುತಿ ನಗರದ ಉದ್ಯಾನದ ಕಟ್ಟಡವನ್ನು ನ್ಯಾಯಾಲಯಕ್ಕೆ ನೀಡುವಂತೆ ವಕೀಲರ ಬಳಗ ಕೋರಿದ್ದು, ಜಿಲ್ಲಾಧಿಕಾರಿ ಆದೇಶಕ್ಕಾಗಿ 2024ರ ಡಿ.19ರಂದು ಪುರಸಭಾಡಳಿತ ಪತ್ರ ಬರೆದಿದೆ.

ಜಿಲ್ಲಾಧಿಕಾರಿ ಕಟ್ಟಡದ ಕೆಲ ಪ್ರಮಾಣಪತ್ರ ತರಿಸಿಕೊಂಡು ಆರು ತಿಂಗಳು ಕಳೆದ ನಂತರ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಬೆಂಗಳೂರಿನ ಪೌರಾಡಳಿತ ನಿರ್ದೇಶಕರಿಗೆ 2025ರ ಮೇ.20ರಂದು ಪತ್ರ ಬರೆದಿದ್ದಾರೆ.

ಪುರಸಭೆಯ ಕಟ್ಟಡಗಳು ಬಾಡಿಗೆ ಇಲ್ಲದೆ ಸುಖಾಸುಮ್ಮನೆ ಪಾಳು ಬಿದ್ದಿದ್ದು, ಅನ್ಯರು ಬಳಕೆ ಮಾಡಿಕೊಳ್ಳುತ್ತಿದ್ದರೂ ಸರ್ಕಾರ ನ್ಯಾಯಾಲಯಕ್ಕೆ ಬಾಡಿಗೆ ರೂಪದಲ್ಲಿ ಕಟ್ಟಡ ಹಸ್ತಾಂತರಿಸಲು ಸತಾಯಿಸುತ್ತಿದೆ ಎಂಬುದು ವಕೀಲರ ಬಳಗದ ವಾದವಾಗಿದೆ.

ಇದೀಗ ಪುರಸಭೆಯ ಕಟ್ಟಡವನ್ನು ತಾತ್ಕಾಲಿಕವಾಗಿ ನ್ಯಾಯಾಲಯಕ್ಕೆ ಹಸ್ತಾಂತರಿಸುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲಗೆ ಪತ್ರ ಬರೆದು ಮೊರೆ ಹೋಗಿದ್ದಾರೆ.

=======

ಪೌರಾಡಳಿತ ನಿರ್ದೇಶಕರೊಂದಿಗೆ ಮಾತನಾಡಿ ಕೂಡಲೇ ನ್ಯಾಯಾಲಯ ಆರಂಭಕ್ಕೆ ಕಟ್ಟಡ ಬಾಡಿಗೆಗೆ ನೀಡುವ ಕುರಿತು ಕ್ರಮವಹಿಸಲಾಗುವುದು.

> ಭಟ್ಟ ಪ್ರಸಾದ್, ಪುರಸಭೆ ಅಧ್ಯಕ್ಷ, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net