

ಕಂಪ್ಲಿ: ನಾಡೋಜ ಬುರ‌್ರಕಥಾ ಈರಮ್ಮ 6ನೇ ಪುಣ್ಯಸ್ಮರಣೆ ನಿಮಿತ್ತ ಆ.12ರಿಂದ ಆ.18ರವರೆಗೆ ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 1ಗಂಟೆವರೆಗೆ ಬುರ‌್ರಕಥಾ ಪರಂಪರೆ, ನಾಡೋಜ ಈರಮ್ಮರ ಕೊಡುಗೆ ಕುರಿತ ಅಂತಾರಾಷ್ಟ್ರೀಯ ವೆಬಿನಾರ್ ಹಮ್ಮಿಕೊಳ್ಳಲಾಗಿದೆ.
ನಾಡೋಜ ಬುರ‌್ರಕಥಾ ಈರಮ್ಮ ಫೌಂಡೇಷನ್, ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಭಾಗ, ಬೆಂಗಳೂರಿನ ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಆ.12ರಂದು ಬೆಳಗ್ಗೆ 10.30ಕ್ಕೆ ಹಳೇ ದರೋಜಿ ಬುರ‌್ರಕಥಾ ಶಿವಮ್ಮ, ಅಶ್ವ ಪಾರ್ವತಮ್ಮರಿಂದ ಈರಮ್ಮ ಸಮಾಧಿಗೆ ಪೂಜೆ ನೆರವೇರಲಿದೆ.
ಫೌಂಡೇಷನ್ ಅಧ್ಯಕ್ಷ ಡಾ.ವೇಷ್ಗಾರು ರಾಮಾಂಜನೇಯ ಪ್ರಾಸ್ತಾವಿಕ ನುಡಿ, ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಚಾಲನೆ ನೀಡುವರು. ಕುಲಪತಿ ಡಾ.ಸ.ಚಿ.ರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಜೋಗನ್ ಶಂಕರ್, ಕನ್ನಡ ವಿವಿ ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ, ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಎಂ.ಮೇತ್ರಿ ಪಾಲ್ಗೊಳ್ಳಲಿದ್ದಾರೆ. ಉಳಿದ ದಿನಗಳಲ್ಲಿ ವಿಶೇಷ ಉಪನ್ಯಾಸಗಳು ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.