

ಕಂಪ್ಲಿ: ಪಟ್ಟಣದ ಮುಸ್ಲಿಂ ಖಬರಸ್ಥಾನ್(ಸುನ್ನಿ) ಕಾರ್ಯಕಾರಿ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ.92 ಮತದಾನವಾಗಿದೆ.
ಇಲ್ಲಿನ ಎಸ್.ಜಿ.ವಿ.ಎಸ್.ಎಸ್.ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿತ್ತು. ಒಂದೇ ಕೇಂದ್ರದಲ್ಲಿ ಮೂರು ಮತಗಟ್ಟೆಗಳನ್ನು ತೆರೆಯಲಾಗಿತ್ತು. ಒಟ್ಟು 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 29 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 1308 ಜನ ಮತದಾರರಿದ್ದು, ಬೆಳಗ್ಗೆ 8 ರಿಂದ ಮಧ್ಯಾಹ್ನ 3ಗಂಟೆತನಕ ಮತದಾನ ಪ್ರಕ್ರಿಯೆ ನಡೆಯಿತು. ಒಟ್ಟಾರೆ 1207 ಜನ ಸದಸ್ಯರು ಮತದಾನ ಮಾಡಿದರು.
ಪಟ್ಟಣದಲ್ಲಿ ಇದೇ ಮೊದಲ ಬಾರಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಡಿ ಮುಸ್ಲಿಂ ಖಬರಸ್ಥಾನ್(ಸುನ್ನಿ) ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆದಿದೆ. ಮತದಾರರು ಖುಷಿಯಿಂದ ಮತಗಟ್ಟೆಗೆ ಆಗಮಿಸಿ ಶಾಂತಿಯುತವಾಗಿ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಕಲಬುರಗಿ ವಿಭಾಗೀಯ ವಕ್ಫ್ ಅಧಿಕಾರಿ ನೂರ್‌ಪಾಷಾ ತಿಳಿಸಿದರು.