ಸಂಸದ ತೇಜಸ್ವಿ ಸೂರ್ಯ ಕ್ಷಮೆ ಕೇಳಲು ರಾಜ್ಯ ರೈತ ಸಂಘದ ತಾಲೂಕು ಘಟಕ ಒತ್ತಾಯ

080223 Kampli Famers Union Appea
ಕಂಪ್ಲಿಯಲ್ಲಿ ತಹಸೀಲ್ದಾರ್ ಗೌಸಿಯಾ ಬೇಗಮ್‌ಗೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Published on

ಕಂಪ್ಲಿ: ರೈತರ ಸಾಲ ಮನ್ನಾದಿಂದ ಉಪಯೋಗವಿಲ್ಲ ಎಂದು ಹೇಳಿಕೆ ನೀಡಿರುವ ಸಂಸದ ತೇಜಸ್ವಿಸೂರ್ಯ ಅವರನ್ನು ಸಂಸದ ಸ್ಥಾನದಿಂದ ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಪದಾಧಿಕಾರಿಗಳು ತಹಸೀಲ್ದಾರ್ ಗೌಸಿಯಾ ಬೇಗಮ್‌ಗೆ ಬುಧವಾರ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ತೇಜಸ್ವಿಸೂರ್ಯ ಕೂಡಲೇ ತಮ್ಮ ಹೇಳಿಕೆ ಹಿಂಪಡೆದು ರೈತರ ಕ್ಷಮೆ ಕೇಳಬೇಕು. ಉದ್ಯಮಿಗಳ ಸಾಲಮನ್ನಾದಿಂದ ದೇಶಕ್ಕೆ ಲಾಭವಾಗಿದೆ ಎನ್ನುವುದಾದರೆ ತೇಜಸ್ವಿಯವರು ಉದ್ಯಮಿಗಳ ಕಬ್ಬಿಣ, ಸಿಮೆಂಟ್ ತಿಂದು ಬದುಕಲಿ. ರೈತರ ಕೃಷಿ ಉತ್ಪನ್ನಗಳನ್ನು ಉಪಯೋಗಿಸಬಾರದು ಎಂದು ಆಕ್ರೋಶವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರ ಅಧ್ಯಕ್ಷ ಕೊಟ್ಟೂರು ರಮೇಶ್ ಮಾತನಾಡಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಡೀಸೆಲ್, ರಸಗೊಬ್ಬರ, ಕ್ರಿಮಿನಾಶಕಗಳ ಬೆಲೆ ಇಳಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು. ರೈತರ ಮಾಗಾಣಿ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಕೃಷಿ ಉತ್ಪನ್ನಗಳ ಶಾಶ್ವತ ಖರೀದಿ ಕೇಂದ್ರ ಸ್ಥಾಪಿಸಬೇಕು. ರೈತರ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಡಿ.ಮುರಾರಿ, ವೀರೇಶ್, ಆದೋನಿ ರಂಗಪ್ಪ, ಸುದರ್ಶನ, ಸೈಯ್ಯದ್ ಷಾಹ್ ಗುಲಾಮ್ ಮುರ್ತುಜಾ ಖಾದ್ರಿ, ಸಣ್ಣ ಜಡೆಪ್ಪ, ವಿರುಪಣ್ಣ, ಆದೋನಿ ನಾಗರಾಜ, ಬಿ.ಕೆ.ಶಿವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net