ಕೋತಿಗಳ ಉಪಟಳಕ್ಕೆ ಬೇಸತ್ತ ಕಂಪ್ಲಿ ಜನ

kmp-1
ಕಂಪ್ಲಿ ಕೋಟೆ ಪ್ರದೇಶದಲ್ಲಿ ತುಂಗಭದ್ರಾ ನದಿ ಬಳಿ ಮರದಲ್ಲಿ ಕೋತಿಗಳಿರುವುದು.
Published on

ಕಂಪ್ಲಿ: ಪಟ್ಟಣದ ಕೋಟೆ ಪ್ರದೇಶದಲ್ಲಿ ಕೋತಿಗಳ ಉಪಟಳ ಹೆಚ್ಚಿದ್ದು, ಕಳೆದ 15 ದಿನಗಳಲ್ಲಿ 10 ಜನರನ್ನು ಕಚ್ಚಿ ಗಾಯಗೊಳಿಸಿವೆ. ಇದರಿಂದ ಜನರು ಭಯಭೀತರಾಗಿದ್ದಾರೆ.

ತುಂಗಭದ್ರಾ ನದಿ ತಟದ 1ಮತ್ತು 13ನೇ ವಾರ್ಡ್‌ನಲ್ಲಿ ಕಪ್ಪು ಹಾಗೂ ಕೆಂಪು ಮುಖದ ಕೋತಿಗಳು ಹಲವು ತಿಂಗಳಿಂದ ಬೀಡು ಬಿಟ್ಟಿವೆ. ಪುಷ್ಪಾ, ಮರಿಯಂಬಿ, ಪಾರ್ವತಮ್ಮ, ಮದೀಯಾ, ಸುಬ್ಬಮ್ಮ, ಅಂಕಿತಾ ಸೇರಿದಂತೆ 10 ಜನರಿಗೆ ಕಚ್ಚಿ ಗಾಯಗೊಳಿಸಿವೆ.

ಗಾಯಗೊಂಡವರು ಕಂಪ್ಲಿ, ಗಂಗಾವತಿ, ಕೊಪ್ಪಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಒಬ್ಬೊಬ್ಬರು ಎಂಟರಿಂದ ಹತ್ತು ಸಾವಿರ ರೂ. ತನಕ ಚಿಕಿತ್ಸಾ ವೆಚ್ಚ ಭರಿಸಿದ್ದಾರೆ.

ಜನ ದಿನಸಿ ಸಾಮಾನು ತರುವಾಗ ದಾಳಿ ಮಾಡಿ, ಕಸಿದುಕೊಂಡು ಹೋಗುತ್ತವೆ. ಮನೆಗೆ ನುಗ್ಗುವ ಕೋತಿಗಳು ಸಾಮಗ್ರಿಗಳನ್ನು ಧ್ವಂಸಗೊಳಿಸಿವೆ. ಫ್ರಿಡ್ಜ್ ತೆಗೆದು ವಸ್ತುಗಳನ್ನು ಹೊತ್ತೊಯ್ಯುತ್ತಿವೆ.

ಆದ್ದರಿಂದ ಕೋತಿಗಳನ್ನು ಸೆರೆ ಹಿಡಿದು ದೂರ ಸಾಗಿಸಿ, ಅವುಗಳ ಹಾವಳಿಯಿಂದ ಪಾರು ಮಾಡುವಂತೆ ನಿವಾಸಿಗಳಾದ ಪಿ.ಖಾಜಾಸಾಬ್, ಮಹಮ್ಮದ್ ರಫಿ, ಅಹ್ಮದ್, ರೇಣುಕಾ, ಭಾಗ್ಯಮ್ಮ, ಸುರೇಶ್ ಸೇರಿ ಅನೇಕರು ಒತ್ತಾಯಿಸಿದ್ದಾರೆ.

ಕೋಟ್: ಕೋತಿ ಕಚ್ಚಿ ಗಾಯಗೊಂಡಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿಯೇ ಚುಚ್ಚುಮದ್ದು ಚಿಕಿತ್ಸೆ ನೀಡಲಾಗುತ್ತದೆ. ತಲೆ ಮತ್ತು ಮುಖದ ಭಾಗದಲ್ಲಿ ಗಂಭೀರ ಗಾಯಗಳಾದಲ್ಲಿ ಅಗತ್ಯ ಚಿಕಿತ್ಸೆಗಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡಲಾಗುವುದು.

> ಡಾ.ರವೀಂದ್ರ ಕನಕೇರಿ. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಕಂಪ್ಲಿ

ಕೋಟ್: ಕೋತಿಗಳ ಉಪಟಳ ಕುರಿತು ಪುರಸಭೆ ಅಧ್ಯಕ್ಷರ ಗಮನಕ್ಕೆ ತಂದು ಸೆರೆಹಿಡಿದು ದೂರ ಸಾಗಿಸಲು ಕ್ರಮ ವಹಿಸಲಾಗುವುದು. ಈ ಕುರಿತು ಅರಣ್ಯ ಇಲಾಖೆಗೆ ಪತ್ರ ಬರೆಯಲಾಗುವುದು.

> ಬಿ.ಮಲ್ಲಿಕಾರ್ಜುನ, ಪುರಸಭೆ ವ್ಯವಸ್ಥಾಪಕ, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net