

ಕಂಪ್ಲಿ: ತಾಲೂಕಿನ ಮಾವಿನಹಳ್ಳಿ ಗ್ರಾಮದ ಮಹಾಂಕಾಳಮ್ಮ ಕಟ್ಟೆ ಬಳಿ ಇರುವ ನಲ್ಲಿಗಳಲ್ಲಿ ಕೊಳಚೆ ಮಿಶ್ರಿತ ನೀರು ಸರಬರಾಜಾಗುತ್ತಿದ್ದು, ಗ್ರಾಮಸ್ಥರಿಗೆ ರೋಗ ಹರಡುವ ಭೀತಿ ಎದುರಾಗಿದೆ.
ಗ್ರಾಮದ ಸುಮಾರು 50 ನಲ್ಲಿಗಳಲ್ಲಿ ಚರಂಡಿ ಮಿಶ್ರಿತ ನೀರಿನೊಂದಿಗೆ ಹುಳುಗಳು ಬರುತ್ತಿವೆ.
15 ದಿನಗಳಿಂದ ಇದೇ ನೀರು ಪೂರೈಕೆಯಾಗುತ್ತಿದ್ದು, ನೀರಗಂಟಿಗಳ ಗಮನಕ್ಕೆ ತಂದರೂ ಕ್ಯಾರೇ ಎನ್ನುತ್ತಿಲ್ಲ. ನಿತ್ಯ ಇದೇ ನೀರು ಬಳಸುತ್ತಿದ್ದು ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ. ಕೆಲವರು ಇದೇ ನೀರನ್ನು ಕುಡಿಯುತ್ತಿದ್ದಾರೆ. ಶುದ್ಧೀಕರಿಸಿ ಕುಡಿಯುವ ನೀರು ಪೂರೈಸಬೇಕು ಎಂದು ಗ್ರಾಮದ ಹೇಮೇಶ್ವರ, ಮದಿರೆ ಸಿದ್ದಮ್ಮ, ರಾಮಕ್ಕ, ವೀರೇಶ್, ಶ್ರೀದೇವಿ, ಲಕ್ಷ್ಮೀ, ಬಡಿಗೇರ ಗಂಗಮ್ಮ, ವಸಂತಮ್ಮ, ಮದಿರೆ ಹೊನ್ನೂರಮ್ಮ ಇತರರು ಒತ್ತಾಯಿಸಿದ್ದಾರೆ.
ಈ ಕುರಿತು ಪಿಡಿಒ ಅಪರಂಜಿ ಪ್ರತಿಕ್ರಿಯಿಸಿ, ನಳದ ನೀರಿನ ಪೈಪ್ ಒಡೆದು ಚರಂಡಿ ನೀರು ಸೇರಿರುವ ಸಾಧ್ಯತೆಗಳಿವೆ. ಪೈಪ್ ಸರಿಪಡಿಸಿ ಶುದ್ಧ ನೀರು ಪೂರೈಸಲಾಗುವುದು ಎಂದು ತಿಳಿಸಿದರು.