

ಅಗತ್ಯ ಸೌಲಭ್ಯ ಕಲ್ಪಿಸಲು ಮನವಿ
ಕಂಪ್ಲಿ: ಸಂಪ್ರಾದಾಯಿಕ ಕುಲವೃತ್ತಿ ಮುಂದುವರಿಸಿಕೊಂಡು ಹೋಗುತ್ತಿರುವ ತಾಲೂಕಿನ ಮಸಣ ಕಾರ್ಮಿಕರಿಗೆ ಬಡತನ, ಅರೆ ನಿರುದ್ಯೋಗ ತಪ್ಪದಾಗಿದೆ.
ಪಟ್ಟಣದಲ್ಲಿ 20ಕ್ಕೂ ಅಧಿಕ ಸೇರಿ ತಾಲೂಕಿನಲ್ಲಿ 110ಕ್ಕೂ ಹೆಚ್ಚು ಮಸಣ ಕಾರ್ಮಿಕ ಕುಟುಂಬಗಳಿವೆ. ಪಟ್ಟಣದಲ್ಲಿ ಹಿಂದು, ಕ್ರೈಸ್ತರ ಎಂಟು ರುದ್ರಭೂಮಿಗಳಿವೆ. ಶವಗಳನ್ನು ದಹಿಸುವ (ಕಿಚ್ಚು) ರುದ್ರಭೂಮಿ ಒಂದು ಮಾತ್ರ ಇದ್ದು, ಉಳಿದವುಗಳಲ್ಲಿ ಕುಣಿ ತೋಡಿ ಶವ ಹೂಳುವ ಕಾಯಕ ಮಾಡುತ್ತಿದ್ದಾರೆ.
ಶವಸಂಸ್ಕಾರ ಸಂದರ್ಭದಲ್ಲಿ ನಾಲ್ವರು ಮಸಣ ಕಾರ್ಮಿಕರು ಕಾರ್ಯನಿರ್ವಹಿಸಿ ತಲಾ ಐದಾರು ನೂರು ರೂ. ಕೂಲಿ ಪಡೆದುಕೊಳ್ಳುತ್ತಾರೆ. ಕೆಲವೊಮ್ಮೆ ಬಡವರ ಶವಸಂಸ್ಕಾರದಲ್ಲಿ ಕೂಲಿಗೂ ತತ್ವಾರ ಆಗುವುದುಂಟು. ಮಸಣ ವೃತ್ತಿ ಇಲ್ಲದಿದ್ದಾಗ ಕೃಷಿ ಕೂಲಿ, ಕಟ್ಟಡ ನಿರ್ಮಾಣ ಮೊದಲಾದ ಕೆಲಸಗಳನ್ನು ಹುಡುಕಿಕೊಂಡು ಹೋಗಬೇಕಿದೆ. ಇದಲ್ಲದೆ ಶವಸಂಸ್ಕಾರ ವೃತ್ತಿ ಸಂಬಂಧಿತ ತೊಂದರೆ, ರೋಗ ರುಜಿನಗಳನ್ನು ಸಹಿಸಿಕೊಳ್ಳಬೇಕಿದೆ.
ಪ್ರತಿ ರುದ್ರಭೂಮಿಗೂ ಸ್ಥಳೀಯ ಸಂಸ್ಥೆಗಳು ಮಸಣ ನಿರ್ವಾಹಕರೆಂದು ನೇಮಕ ಮಾಡಿಕೊಳ್ಳಬೇಕು. ಮಸಣ ಕಾರ್ಮಿಕರ ಗಣತಿ ಮಾಡಬೇಕು. ಶವ ಸಂಸ್ಕಾರದ ಕುಣಿ ತೆಗೆಯುವ ಉದ್ಯೋಗವನ್ನು ನರೇಗಾ ಕೆಲಸವೆಂದು ಪರಿಗಣಿಸಿ ಪ್ರತಿ ಕುಣಿಗೂ ಕನಿಷ್ಠ 3000 ರೂ. ಕೂಲಿ ಪಾವತಿಸಬೇಕು. ಮಸಣ ಕಾರ್ಮಿಕರಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ಒದಗಿಸಬೇಕು. ಭವಿಷ್ಯ ನಿಧಿ ಜಾರಿಗೊಳಿಸಬೇಕು. ಜೀವನ ನಿರ್ವಹಣೆಗೆ ಮಸಣ ಕಾರ್ಮಿಕ ಕುಟುಂಬಕ್ಕೆ ಐದು ಎಕರೆ ಜಮೀನು, ನಿವೇಶನದೊಂದಿಗೆ ವಸತಿ ಸೌಲಭ್ಯ, ಮಾಸಿಕ ಪಿಂಚಣಿ ಒದಗಿಸಬೇಕು. ಹೈನುಗಾರಿಕೆ ಇತರ ಸ್ವಉದ್ಯೋಗ ಕೈಗೊಳ್ಳಲು ಶೇ.75 ಸಹಾಯಧನ ಸೌಲಭ್ಯ ಒದಗಿಸಬೇಕಿದೆ. ಕಿರಾಣಿ, ಪಡಿತರ, ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ಒದಗಿಸುವಲ್ಲಿ ಸರ್ಕಾರ ಮುಂದಾಗಬೇಕೆಂದು ಮಸಣ ಕಾರ್ಮಿಕರಾದ ಹುಲುಗಪ್ಪ ತಳವಾರ, ಪಿ.ರಾಮಲಿ, ಆದಿಮನಿ ವೀರೇಶ್, ಕುಚ್ಗಿಡಿ ವಿರುಪಣ್ಣ, ಸಿ.ರಮೇಶ್ ಆಗ್ರಹಿಸಿದ್ದಾರೆ.
ಎಲ್ಲ ರುದ್ರಭೂಮಿಗಳಲ್ಲಿ ನೀರು, ನೆರಳು, ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಸ್ಮಶಾನಕ್ಕೂ ಸ್ಥಳೀಯ ಆಡಳಿತ ಮಸಣ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ಸುರಕ್ಷಾ ಪರಿಕರ, ಆರೋಗ್ಯ ವಿಮೆ ಒದಗಿಸಬೇಕು.| ಎಂ.ಸಿ.ನಿಂಗಪ್ಪ ತಾಲೂಕು ಅಧ್ಯಕ್ಷ, ಮಸಣ ಕಾರ್ಮಿಕರ ಸಂಘ, ಕಂಪ್ಲಿ
ಮಸಣ ಕಾರ್ಮಿಕರ ನಿರ್ವಹಣೆ ಸ್ಥಳೀಯ ಸಂಸ್ಥೆಗಳ ಹೊಣೆಯಾಗಿದ್ದು, ನಿಯಮಾನುಸಾರ ಮಸಣ ನೇಮಕ ಮಾಡಿಕೊಳ್ಳಬಹುದು. ಮಸಣ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು.| ಗೌಸಿಯಾಬೇಗಂ ತಹಸೀಲ್ದಾರ್, ಕಂಪ್ಲಿ