

ಕಂಪ್ಲಿ: ಮಾಧವತೀರ್ಥರು ಇಲ್ಲಿ ಬೃಂದಾವನಸ್ಥರಾಗಿ ಕಂಪ್ಲಿಯ ಹಿರಿಮೆ, ಯತಿ ಪರಂಪರೆಯ ಮಹತ್ವವನ್ನು ಹೆಚ್ಚಿಸಿದ್ದಾರೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹೇಳಿದರು.
ಹಾವೇರಿಯಿಂದ ಮಂತ್ರಾಲಯದತ್ತ ಹೋಗುತ್ತಿರುವ ವೇಳೆ ಮಾರ್ಗಮಧ್ಯೆ ಇಲ್ಲಿನ ಕೋಟೆ ತುಂಗಭದ್ರಾ ನದಿ ತೀರಕ್ಕೆ ಬುಧವಾರ ಆಗಮಿಸಿ ಮಾಧವತೀರ್ಥರ ಬೃಂದಾವನಕ್ಕೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.
ಎಲ್ಲ ಭಕ್ತರ ಸಹಕಾರದಿಂದ ಮಾಧವತೀರ್ಥರ ಬೃಂದಾವನ ಜೀರ್ಣೋದ್ಧಾರಗೊಳಿಸುವುದರೊಂದಿಗೆ ಸುತ್ತ ಸ್ವಚ್ಛತೆ ಕಾಪಾಡಿ, ಪೂಜೋಪಚಾರಕ್ಕೆ ಅಗತ್ಯ ಕಟ್ಟಡ ನಿರ್ಮಿಸಲಾಗುವುದು. ಮಾಧವತೀರ್ಥರ ತತ್ವ ಆದರ್ಶಗಳನ್ನು ಅರಿತು ಪರಿಪಾಲಿಸಬೇಕು ಎಂದರು.
ಕಂಪ್ಲಿ ರಾಘವೇಂದ್ರ ಶಾಖಾಮಠದ ವಿಚಾರಣಾಕರ್ತ ಟಿ.ಕೊಟ್ರೇಶ್, ವ್ಯವಸ್ಥಾಪಕ ಪುರುಷೋತ್ತಮ, ಪುರೋಹಿತ ಕಿಶೋರಾಚಾರ್, ಗುರುರಾಜ ಸೇವಾಮಂಡಳಿಯ ಪ್ರಮುಖ ಡಿ.ಗುರುರಾಜಾಚಾರ್, ಭಕ್ತರಾದ ಕೋಟೆಯ ಡಾ.ಧೀರೇಂದ್ರ ವೈದ್ಯ, ಹೊಸಪೇಟೆಯ ದಿಗ್ಗಾವಿ ಗುರುರಾಜಾಚಾರ್, ಜೋಯಿಸ್ ಶೇಷಗಿರಿ ಆಚಾರ್, ಜಗದೀಶ ಜಿ.ರಾಯ್ಕರ್, ದಿಗ್ಗಾವಿ ವೇಣುಗೋಪಾಲಾಚಾರ್, ರಮೇಶ್ ಇತರರಿದ್ದರು.