

ಕಂಪ್ಲಿ: ತಾಲೂಕಿನ ಸಣಾಪುರ ರಸ್ತೆಯ ಎಲ್‌ಎಲ್‌ಸಿ ಉಪ ಕಾಲುವೆಯ ಸ್ವಾಮೇರು ಮಡಿಯನ್ನು ಖಾಸಗಿಯವರು ಅನಧಿಕೃತವಾಗಿ ಮುಚ್ಚಿ ಹಾಕುವ ಕಾಮಗಾರಿಯನ್ನು ಕೂಡಲೇ ತಡೆಯಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಗೌಸಿಯಾಬೇಗಂಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಗರ ಅಧ್ಯಕ್ಷ ಕೊಟ್ಟೂರು ರಮೇಶ್ ಬುಧವಾರ ಮನವಿ ಸಲ್ಲಿಸಿದರು.
ಖಾಸಗಿಯವರು ಭೂ ಪರಿವರ್ತನೆ ಹಾಗೂ ಬಡಾವಣೆ ನಿರ್ಮಿಸಲಿಕ್ಕಾಗಿ ನೀರು ಹರಿಯುವ ಮಡಿಯನ್ನು ಮುಚ್ಚಿ ಹಾಕುತ್ತಿದ್ದಾರೆ. ಮಡಿಯ ಸುತ್ತಲೂ ಬೆಳೆ ಬೆಳೆಯುವ ಕೃಷಿ ಭೂಮಿಯಿದ್ದು ಮಡಿ ಕೆಳಭಾಗದ ರೈತರಿಗೆ ನೀರಿನ ತೊಂದರೆಯಾಗುತ್ತದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸಿ ಯಥಾಸ್ಥಿತಿ ಕಾಪಾಡಲು ಮುಂದಾಗಬೇಕು. ಅಲ್ಲದೆ, ಬಹು ವರ್ಷಗಳಿಂದ ಇರುವ ನೀರು ಹರಿಯುವ ಮಡಿಯನ್ನು ಮುಚ್ಚಿ ಹಾಕಲು ಮುಂದಾಗಿರುವವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಡಿ.ಮುರಾರಿ, ವಿ.ಟಿ.ನಾಗರಾಜ, ತಿಮ್ಮಪ್ಪ ನಾಯಕ, ಕುರಿ ವೀರೇಶ್, ರಾಕೇಶ್ ಬಾಗ್ರೇಚಾ, ಕುರುಗೋಡು ರಾಜೇಶ್, ಕೃಷ್ಣಪ್ಪ ಇತರರಿದ್ದರು.