

ಕಂಪ್ಲಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಅಕ್ಕಿಗಿರಣಿ ಹಮಾಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಮೈನುದ್ದೀನ್ ಮಾತನಾಡಿ, 23 ವಲಯಗಳ ಅಸಂಘಟಿತ ಕಾರ್ಮಿಕರಿಗೆ ಜಾರಿಗೊಳಿಸಿದ ಸೌಲಭ್ಯಗಳೊಂದಿಗೆ ಅಕ್ಕಿಗಿರಣಿ ಹಮಾಲಿ ಕಾರ್ಮಿಕರಿಗೂ ಸಹಜ ಮರಣ ಹೊಂದಿದ್ದಲ್ಲಿ ಒಂದು ಲಕ್ಷ ರೂ. ಪರಿಹಾರ ನೀಡಬೇಕು.
ಶವ ಸಂಸ್ಕಾರದ ಪರಿಹಾರದ ಮೊತ್ತವನ್ನು 25 ಸಾವಿರ ರೂ. ಹೆಚ್ಚಿಸಬೇಕು. ಕಾರ್ಮಿಕರ ಭವಿಷ್ಯ ನಿಧಿ, ಪಿಂಚಣಿ ಯೋಜನೆ ಜಾರಿಗೊಳಿಸಬೇಕು. 60 ವರ್ಷ ಮೀರಿದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಒಂದು ಲಕ್ಷ ರೂ. ನಿವೃತ್ತಿ ಪರಿಹಾರ ನೀಡಬೇಕು.
ಅಕ್ಕಿಗಿರಣಿ, ಉಗ್ರಾಣ, ನಾನಾ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಹಮಾಲಿಗಳಿಗೆ ಕಾಯಕ ನಿಧಿ, ಭವಿಷ್ಯನಿಧಿ, ವಿಮಾ ಸೌಲಭ್ಯ, ಬೋನಸ್ ನೀಡಬೇಕು, ವಸತಿರಹಿತ ಹಮಾಲಿಗಳಿಗೆ ವಸತಿ ಸೌಲಭ್ಯ, ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ನರಸಪ್ಪ, ಪದಾಧಿಕಾರಿಗಳಾದ ಶಾಂತಪ್ಪ ಪೂಜಾರ್, ತಳವಾರ ಪರಶುರಾಮ, ವಲಿಸಾಬ್, ರಾಮಣ್ಣ, ನಾಯಕರ ಬಸವರಾಜ, ಕೆ.ಮಲ್ಲೇಶ್, ಶಿವಲಿಂಗಪ್ಪ, ರಾಘವೇಂದ್ರ ನಾಯಕ್, ಹೊಂದಲಿ ಮೆಹಬೂಬ್‌ಸಾಬ್, ನಬೀಸಾಬ್, ಶೇಕ್ಷಾವಲಿ, ಎಚ್.ನಾಗರಾಜ, ಸಿ.ಬಸವರಾಜ, ಬಸವ, ರಮೇಶ, ಗನ್ನಿ, ಪೀರಾಸಾಬ್ ಇತರರಿದ್ದರು.