

ಕಂಪ್ಲಿ: ಎರಡು ದಿನ ಸುರಿದ ಮಳೆಯಿಂದ ಮೆಣಸಿನಕಾಯಿ ಬೆಳೆದ ರೈತನಿಗೆ ನಷ್ಟದ ಭೀತಿ ಎದುರಾಗಿದೆ. ಅಲ್ಲದೆ ಭತ್ತ ಸಸಿ ನಾಟಿಗೆ ತೊಡಕಾಗಿದೆ.
ಎಪಿಎಂಸಿ, ಶ್ರೀರಾಮರಂಗಾಪುರ, ದೇವಸಮುದ್ರ, ಸುಗ್ಗೇನಹಳ್ಳಿ, ಮೆಟ್ರಿ, ದೇವಲಾಪುರ ಗ್ರಾಮಗಳಲ್ಲಿ ಒಣಹಾಕಿದ ಮೆಣಸಿನಕಾಯಿ ಮಳೆ ನೀರಿಗೆ ತೊಯ್ದು ಬೂಜುಗಟ್ಟಿದ್ದು, ನಷ್ಟದ ಜತೆ ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ಸಣಾಪುರ ರಸ್ತೆ ಬಳಿ ನಾಲ್ಕು ಎಕರೆ ಮೆಣಸಿನಕಾಯಿ ಬೆಳೆದಿದ್ದು, ಕಾಯಿ ಕೊಯ್ಲು ಮಾಡಿ ಒಣಗಲು ಹಾಕಲಾಗಿತ್ತು. ಅಕಾಲಿಕ ಮಳೆಗೆ ಮೆಣಸಿನಕಾಯಿ ತೊಯ್ದಿದ್ದು,
ಬೂಜು ಕಾಣಿಸಿಕೊಂಡಿದೆ. ಕೆಲ ಕಾಯಿಗಳು ಕೊಳೆವ ಹಂತಕ್ಕೆ ತಲುಪಿವೆ. ಇದರಿಂದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ ಬೆಲೆ ಕಡಿಮೆಯಾಗಲಿದೆ. ಮೇಲಾಗಿ ಮೆಣಸಿನಕಾಯಿ ಒಣಗಿಸುವ, ಆರಿಸುವ ಕೂಲಿ ವೆಚ್ಚವೂ ಹೆಚ್ಚಲಿದೆ. ಕನಿಷ್ಟ 20 ಸಾವಿರ ರೂ. ನಷ್ಟವಾಗಿದೆ ಎಂದು ಬೆಳೆಗಾರ ಕೊಟ್ಟೂರು ರಮೇಶ್ ಅಲವತ್ತುಕೊಂಡಿದ್ದಾರೆ. ಕೆಲ ರೈತರು ಮೆಣಸಿನಕಾಯಿಗೆ ತಾಡಪಾಲ್ ಮುಚ್ಚಿ ಮಳೆಯಿಂದ ರಕ್ಷಿಸಲು ಹರಸಾಹಸಪಟ್ಟರು.
ಕುರುಗೋಡು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬುಧವಾರ ಹಾಗೂ ಗುರುವಾರ ಮಳೆ ಸುರಿದಿದ್ದು, ಮೆಣಸಿನಕಾಯಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಒಣ ಮೆಣಸಿನಕಾಯಿಗೆ ಉತ್ತಮ ಬೆಲೆ ಇದೆ. ಆದರೆ, ಮಚ್ಚೆ ರೋಗ ಕಾಣಿಸಿಕೊಂಡ ಕಾರಣ ಇಳುವರಿ ಕುಂಠಿತಗೊಂಡಿದೆ.
ಈಗ ಅಕಾಲಿಕ ಮಳೆ ಸುರಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕುರುಗೋಡು ವ್ಯಾಪ್ತಿಯಲ್ಲಿ ಹೆಚ್ಚಾಗಿ ಕೆಂಪು ಮೆಣಸಿಕಾಯಿ ಬೆಳೆಯಲಾಗುತ್ತದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 35 ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಕುರುಗೋಡು ಹಾಗೂ ಕೋಳೂರು ಹೋಬಳಿಯಲ್ಲಿ ಅತಿ ಹೆಚ್ಚು ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವ ಕಾರಣ ಮೆಣಸಿನಕಾಯಿ ಒಣಗಿಸಲು ಹಾಕಲಾಗಿತ್ತು. ಗುರುವಾರ ದಿಢೀರನೆ ಸುರಿದ ಮಳೆಗೆ ಮೆಣಸಿನಕಾಯಿ ತೊಯ್ದಿದ್ದು, ಕಪ್ಪಾಗುವ ಸಾಧ್ಯತೆ ಇದೆ. ಅಲ್ಲದೆ ಬೆಲೆ ಕಳೆದುಕೊಳ್ಳುವ ಆತಂಕ ರೈತರನ್ನು ಕಾಡುತ್ತಿದೆ. ಮಳೆ ಮುಂದುವರಿದರೆ ಗಿಡದಲ್ಲಿರುವ ಕಾಯಿಗಳಿಗೆ ರೋಗ ತಾಗುವ ಸಂಭವ ಹೆಚ್ಚಿದ್ದು, ರೈತರು ಕಂಗಾಲಾಗಿದ್ದಾರೆ.