

ಕಂಪ್ಲಿ: ಕಾಟಿಕ್ ಸಮುದಾಯವನ್ನು ಎಸ್ಸಿಗೆ ಸೇರಿಸಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಸಮುದಾಯದ ಮುಖಂಡರು ಸೋಮವಾರ ತಹಸೀಲ್ದಾರ್ ಗೌಸಿಯಾಬೇಗಂಗೆ ಮನವಿ ಸಲ್ಲಿಸಿದರು.
ಸಮುದಾಯದ ತಾಲೂಕು ಅಧ್ಯಕ್ಷ ಕೆ.ಸುಭಾಷ್ ಮುಕ್ತುಂಕಾರಿ ಮಾತನಾಡಿ, ರಾಜ್ಯದಲ್ಲಿ ಕಾಟಿಕ್ ಹಾಗೂ ಉಪ ಜಾತಿಯವರು ಕುರಿ, ಮೇಕೆ ಮಾಂಸ ಹಾಗೂ ಸಾರಾಯಿ ಮಾರುವ ಮೂಲಕ ಜೀವನ ಸಾಗಿಸುತ್ತಿದ್ದು, ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದಾರೆ. ಈಗಾಗಲೇ ಕಾಟಿಕ್ ಸಮುದಾಯದವರನ್ನು ದೇಶದ ಹನ್ನೊಂದು ರಾಜ್ಯ, ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಸಿ ಪಟ್ಟಿಗೆ ಸೇರಿಸಲಾಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಒಬಿಸಿಗೆ ಸೇರಿಸಿ ಅನ್ಯಾಯ ಎಸಗಲಾಗುತ್ತಿದೆ ಎಂದು ದೂರಿದರು.
ಕುಲಶಾಸ್ತ್ರೀಯ ಅಧ್ಯಯನ ವರದಿ ಸಿದ್ಧವಿದ್ದು, ಇದರೊಡನೆ ಕಲಾಲ್, ಕಾಟಿಕ್, ಕಸಾಬ್, ಮರಟ್ಟಿ, ಸೂರ್ಯವಂಶ ಕ್ಷತ್ರೀಯ, ಆರೇರ್, ಆರೇಕಸಾಯಿ, ಆರೇಕಾಟೀಕಲು, ಮರಾಠಿ, ಕಟುಕ ಈ ಉಪ ಪಂಗಡಗಳನ್ನು ಎಸ್ಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಮುಖಂಡರಾದ ಕೆ.ಸಂದೀಪ್, ಕೆ.ಮೋಹನ್‌ರಾವ್, ಕೆ.ಪ್ರಕಾಶರಾವ್, ಕೆ.ಎಂ. ಮಂಜುನಾಥ, ಕೆ.ಸುಧಾಕರರಾವ್, ಎಂ.ನಾಗರಾಜ ರಾವ್, ಜೆ.ಅಶೋಕ್, ಜೆ.ಉಮೇಶ್, ಕೆ.ಎಂ.ರಾಘವೇಂದ್ರ, ಬಿ.ವೀರೇಶ್, ಎಂ.ಸುನೀಲ್, ಕೆ.ಅಲ್ಲಿರಾವ್, ವೀರೇಶ್, ಬಿ.ಸುನೀಲ್ ಇತರರಿದ್ದರು.