ಕಾರ್ಮಿಕರ ತ್ರಿಪಕ್ಷೀಯ ವೇತನ ಸಭೆ ಕರೆಯಲಿ

kmp-1
ಕಂಪ್ಲಿಯಲ್ಲಿ ಆಯೋಜಿಸಿದ್ದ ಸಕ್ಕರೆ ಕಾರ್ಮಿಕರ ಸಮಾವೇಶದಲ್ಲಿ ಕರ್ನಾಟಕ ಶುಗರ್ ವರ್ಕರ್ಸ್‌ ಫೆಡರೇಷನ್ ಗೌರವ ಅಧ್ಯಕ್ಷ ಅರವಿ ಬಸವನಗೌಡ ಮಾತನಾಡಿದರು. ಪದಾಧಿಕಾರಿಗಳಾದ ಜಿ.ಎಸ್.ಚಕ್ರಪಾಣಿ, ಬಸವರಾಜ ಪೂಜಾರಿ, ವಿಜಯ ಯಾದವ್, ಪ್ರಕಾಶ ಬಸಪ್ಪ ಕಬ್ಬೂರು ಇತರರಿದ್ದರು.
Published on

ಕಂಪ್ಲಿ: ರಾಜ್ಯದ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳ ನೌಕರರ ವೇತನ ಪರಿಷ್ಕರಣೆ ಕುರಿತು ಸರ್ಕಾರದ ನಿರ್ಲಕ್ಷ್ಯ ಖಂಡನೀಯ ಎಂದು ಕರ್ನಾಟಕ ಶುಗರ್ ವರ್ಕರ್ಸ್ ಫೆಡರೇಷನ್ ಗೌರವ ಅಧ್ಯಕ್ಷ ಅರವಿ ಬಸವನಗೌಡ ಹೇಳಿದರು.

ಇಲ್ಲಿನ ಸಕ್ಕರೆ ಕಾರ್ಖಾನೆಯ ಮುಕ್ತಿನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ಸಕ್ಕರೆ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದರು. 2022ರ ಮಾ.31ಕ್ಕೆ ಸಕ್ಕರೆ ಕಾರ್ಮಿಕರ ತ್ರಿಪಕ್ಷೀಯ ವೇತನ ಒಪ್ಪಂದ ಮುಕ್ತಾಯವಾಗಿದೆ.

ವೇತನ ಪರಿಷ್ಕರಣೆಗೆ ಸರ್ಕಾರ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಾರ್ಮಿಕ ಪ್ರತಿನಿಧಿಗಳನ್ನೊಳಗೊಂಡ ತ್ರಿಪಕ್ಷೀಯ ವೇತನ ಸಮಿತಿ ರಚಿಸುವಂತೆ ಅನೇಕ ಬಾರಿ ಒತ್ತಾಯಿಸಿದ್ದರಿಂದ 2023ರ ನ.17ರಂದು ತ್ರಿಪಕ್ಷೀಯ ಸಮಿತಿಯನ್ನು ರಾಜ್ಯ ಕಾರ್ಮಿಕರ ಅಧ್ಯಕ್ಷತೆ, ಸಕ್ಕರೆ ಸಚಿವರ ಉಪಾಧ್ಯಕ್ಷತೆಯಲ್ಲಿ ರಚಿಸಲಾಯಿತು.

ವೇತನ ಸಮಿತಿಯ ಪ್ರಥಮ ಸಭೆ ಕರೆಯುವಂತೆ ಮತ್ತೆ ಒತ್ತಾಯಿಸಿದಾಗ 2025ರ ಫೆ.20ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಮೊದಲ ಸಭೆ ಕರೆಯಲಾಯಿತು. ಈ ಸಭೆಯಲ್ಲಿ ಆಡಳಿತ ವರ್ಗದವರು ಗೈರಾಗಿದ್ದರಿಂದ ಸಭೆ ಮುಂದೂಡಲಾಯಿತು. ಈಗ ಎರಡು ತಿಂಗಳಾದರೂ ಸಭೆ ನಡೆದಿಲ್ಲ.

ಇದರಿಂದ ರಾಜ್ಯದ ನಾನಾ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ 75 ಸಾವಿರ ಕಾರ್ಮಿಕರ ವೇತನ ಹೆಚ್ಚಳವಾಗಿಲ್ಲ. ಕೂಡಲೇ ತ್ರಿಪಕ್ಷೀಯ ವೇತನ ಸಭೆ ಕರೆದು ಶೇ.30 ವೇತನ ಹೆಚ್ಚಿಸಿ ಪರಿಷ್ಕೃತ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಬಾಗಲಕೋಟೆ ಜಿಲ್ಲೆಯ ನೈನಾಗಲಿ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಯೂನಿಯನ್ ಅಧ್ಯಕ್ಷ ಮಲ್ಲಿಕಾರ್ಜುನ ಗಂಡುಡಿ ಮಾತನಾಡಿ, ಸಕ್ಕರೆ ಕಾರ್ಖಾನೆಯ ನೌಕರರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು.

ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಬೇಕು. ಆರನೇ ವೇತನ ಹಿಂಬಾಕಿ ಪಾವತಿಸಬೇಕು. ಪರಿಷ್ಕೃತ ಏಳನೇ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಬೀದರ್‌ನ ಅರ್ಜುನ ತಮಗಕರ್, ಕಲಬುರಗಿಯ ಶರಣಬಸಪ್ಪ ಕಲಶೆಟ್ಟಿ, ಬೆಡಕಿಹಾಳ ಸಚಿನ್, ಮೈಸೂರಿನ ಬೃಂಗೇಶ್, ಚಂದ್ರಶೇಖರ್ ಮೇಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net