

ಕಂಪ್ಲಿ: ಚಿತ್ರದುರ್ಗದ ರೇಣುಕಸ್ವಾಮಿ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದ ತಹಸೀಲ್ದಾರ್ ಶಿವರಾಜಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ ನೆಪದ ಮೇಲೆ ನಟ ದರ್ಶನ್ ಮತ್ತು 17 ಹೆಚ್ಚು ಜನ ಪ್ರತ್ಯಕ್ಷ ಪರೋಕ್ಷವಾಗಿ ರೇಣುಕಸ್ವಾಮಿ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ಚಿತ್ರರಂಗದ ನಾಯಕ ದರ್ಶನ್ ನಿಜ ಜೀವನದಲ್ಲಿ ಖಳನಾಯಕನಾಗಿದ್ದಾರೆ. ರೇಣುಕಸ್ವಾಮಿ ಹತ್ಯೆ ಹಿಂದೆ ನಟ ದರ್ಶನ್ ಜೊತೆ ಪ್ರಭಾವಿ ಅಧಿಕಾರಿಗಳ ಕೈವಾಡವಿದೆ. ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕರವೇ ತಾಲೂಕಾಧ್ಯಕ್ಷ ಬಳೆ ಮಲ್ಲಿಕಾರ್ಜುನ ಆಗ್ರಹಿಸಿದರು.
ದರ್ಶನ್‌ಗೆ ನೀಡುವ ಶಿಕ್ಷೆ ಭವಿಷ್ಯದಲ್ಲಿ ಅಪರಾಧಗಳಿಗೆ ಕಡಿವಾಣ ಬೀಳಲಿ. ಕೊಲೆಗೀಡಾದ ರೇಣುಕಸ್ವಾಮಿ ಕುಟುಂಬಕ್ಕೆ ಭದ್ರತೆ ಯೊಂದಿಗೆ ಪರಿಹಾರ ನೀಡಬೇಕು. ಪ್ರಕರಣದಲ್ಲಿ ಉದಾಸೀನ ತೋರಿದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕರವೇ ಪದಾಧಿಕಾರಿಗಳಾದ ವಿ.ಬಿ.ನಾಗರಾಜ, ದೊಡ್ಡ ಯರ‌್ರಿಸ್ವಾಮಿ, ಬಸವರಾಜ, ಗಣೇಶ್, ಬಿ.ಹೊನ್ನೂರಪ್ಪ, ಯು.ಜಿಲಾನ್, ಗಂಗಾಧರ, ಎಂ.ಶೆಕ್ಷಾವಲಿ, ಬಿ.ಶೇಖರಿ, ವೈ.ಬಸವರಾಜ, ಎಂ.ಶ್ರೀನಿವಾಸ, ಸನ್ನಿ ತಳವಾರ ಇತರರಿದ್ದರು.