ಮೀಟರ್ ಅಳವಡಿಸಿ ಶುಲ್ಕ ವಿಧಿಸಲು ಷಡ್ಯಂತ್ರ

Untitled design(12)
ಬಳ್ಳಾರಿಯಲ್ಲಿ ಜೆಸ್ಕಾಂ ಎಂ.ಡಿ. ಕೆ.ರವೀಂದ್ರಗೆ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಬುಧವಾರ ಮನವಿ ಸಲ್ಲಿಸಿದರು. ಜಿಲ್ಲಾ ಉಪಾಧ್ಯಕ್ಷ ಜೆ.ಭರಮರೆಡ್ಡಿ, ಪದಾಧಿಕಾರಿಗಳಾದ ಕೊಟ್ಟೂರು ರಮೇಶ, ಆದೋನಿ ರಂಗಪ್ಪ, ವೀರೇಶ, ವಿರುಪಣ್ಣ ಇದ್ದರು.
Published on

ಕಂಪ್ಲಿ: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮೂಲಕ ಖಾಸಗೀಕರಣಗೊಳಿಸಿ, ವಿದ್ಯುತ್ ಶುಲ್ಕ ವಿಧಿಸಲು ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಸ್ಥಳೀಯ ರೈತ ಸಂಘದ ಪದಾಧಿಕಾರಿಗಳು ಬಳ್ಳಾರಿ ಜೆಸ್ಕಾಂ ವಿಭಾಗೀಯ ಕಚೇರಿಯಲ್ಲಿ, ಜೆಸ್ಕಾಂ ಎಂಡಿ ಕೆ.ರವೀಂದ್ರಗೆ ಬುಧವಾರ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ನಂಬರ್ ಜೋಡಿಸುವ ಮೂಲಕ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಷಡ್ಯಂತ್ರ್ಯ ರಾಜ್ಯದಲ್ಲಿ ತ್ವರಿತಗತಿಯಲ್ಲಿ ನಡೆದಿದೆ. 2023ರ ಸೆ.22ರಿಂದ ವಿದ್ಯುತ್ ಪರಿವರ್ತಕ, ಕಂಬ, ವೈರ್, ಇತರ ಸಾಮಾಗ್ರಿಗಳನ್ನು ರೈತರು ಸ್ವಂತ ಖರ್ಚಿನಲ್ಲಿ ಖರೀದಿಸಿ ವಿದ್ಯುತ್ ಸಂಪರ್ಕ ಪಡೆಯುವಂತೆ ಕಾನೂನು ಜಾರಿಗೊಳಿಸಲಾಗಿದೆ ಎಂದು ದೂರಿದರು.

2001ರಲ್ಲಿ ರೈತರು ಹೋರಾಟ ನಡೆಸಿ ಉಚಿತ ವಿದ್ಯುತ್ ಪಡೆದಿದ್ದರು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಿ ಕಾನೂನು ಅನುಷ್ಠಾನಗೊಳಿಸುವ ತನಕ ಉಚಿತ ವಿದ್ಯುತ್ ಸರಬರಾಜು ಹಾಗೂ ಇತರ ಕೃಷಿ ಚಟುವಟಿಕೆಗಳಿಗೆ ಸಹಾಯಧನ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಿಸುವುದನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ರೈತರಿಗೆ ವಿದ್ಯುತ್ ಪರಿವರ್ತಕ, ಕಂಬ, ವೈರ್, ಇತರ ಉಪಕರಣಗಳನ್ನು ಜೆಸ್ಕಾಂ ಉಚಿತವಾಗಿ ಒದಗಿಸಿ ವಿದ್ಯುತ್ ಸಂಪರ್ಕ ನೀಡಬೇಕು. ಮನೆ ಬಳಕೆ ವಿದ್ಯುತ್ ದರ ಕಡಿತಗೊಳಿಸಬೇಕು. ವಿದ್ಯುತ್ ಅಪಘಾತಗಳಿಗೀಡಾಗಿ ಮರಣ ಹೊಂದಿದವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ಸೋಲಾರ್ ಸಂಪರ್ಕ ಹೊಂದಿರುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಆದೇಶ ಕೈಬಿಡಬೇಕು. ನಗರ ಹಳ್ಳಿಗಳಲ್ಲಿ ತಾರತಮ್ಯವಿಲ್ಲದೆ ಸಮಾನವಾಗಿ ವಿದ್ಯುತ್ ಪೂರೈಸಬೇಕು ಎಂದು ಬಿ.ವಿ.ಗೌಡ ಆಗ್ರಹಿಸಿದರು. ಪ್ರಮುಖರಾದ ತಿಮ್ಮಪ್ಪ, ಸುಧಾಕರ, ನಾಗರಾಜ, ವಿ.ಟಿ.ರಾಜು, ಜೆಸ್ಕಾಂ ಸಿಇ ಲಕ್ಷ್ಮಣ ಚವ್ಹಾಣ, ಎಸ್‌ಇ ಶರೀಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net