ಜವಾರಿ ತಳಿ ಸಂರಕ್ಷಣೆಗೆ ಗೋವು ಸಾಕಣೆ

Devalapura Jawari Cows
ದೇವಲಾಪುರ ಗ್ರಾಮದ ಗದ್ದೆಯೊಂದರಲ್ಲಿ ಹುಲ್ಲು ಮೇಯುತ್ತಿರುವ ಆಕಳ ಹಿಂಡು.
Published on

ಕಂಪ್ಲಿ: ಸೆಗಣಿ ಮುಟ್ಟಲೂ ಇಚ್ಛಿಸದ ಯುವಕರು ಜಾನುವಾರುಗಳ ಸಾಕಲು ಹಿಂದೇಟು ಹಾಕುತ್ತಿರುವ ಪ್ರಸ್ತುತ ದಿನಗಳಲ್ಲಿ ತಾಲೂಕಿನ ದೇವಲಾಪುರ ಗ್ರಾಮದ ಗೊಲ್ಲರ ಭೀಮಪ್ಪ ಅವರು ಯಾವುದೇ ಲಾಭದಾಸೆ ಇಲ್ಲದೆ ಜವಾರಿ ಆಕಳುಗಳ ಸಂತಾನ ಸಂರಕ್ಷಿಸಲೆಂದೇ ಗೋವುಗಳ ಸಾಕಣೆ ಮಾಡುತ್ತಿದ್ದಾರೆ.

ಗೊಲ್ಲರ ಭೀಮಪ್ಪ 15 ವರ್ಷಗಳ ಹಿಂದೆ ಎರಡು ಆಕಳನ್ನು ಸಾಕಲು ಶುರು ಮಾಡಿದ್ದು, ಇದೀಗ 15 ಕರು ಸೇರಿ 48 ಜವಾರಿ ಆಕಳು ಸಾಕುತ್ತಿದ್ದಾರೆ. ಹಾಲನ್ನು ಹಿಂಡದೆ, ಮಾರಾಟ ಮಾಡದೆ ಕರುಗಳಿಗೆ ಬಿಡುತ್ತಾರೆ.

ಮನೆ ಬಳಕೆ ಮತ್ತು ಮನೆ ಮಕ್ಕಳ ಹಾಲಿಗಾಗಿ ಮೂರು ಎಮ್ಮೆಗಳನ್ನು ಸಾಕಿದ್ದಾರೆ. ಔಷಧಕ್ಕಾಗಿ ಇಲ್ಲವೆ ಹಸುಗೂಸುಗಾಗಿ ಬೇಡಿದವರಿಗೆ ಆಕಳ ಹಾಲು ಹಿಂಡಿ ಕೊಡುತ್ತಾರೆ. ನಿರಂತರ ಹಾಲಿಗಾಗಿ ಆಕಳು ಸಾಕಿಕೊಂಡು ವಾಪಸ್ ನೀಡುವಂತೆ ಐದಾರು ಜನರಿಗೆ ಉಚಿತವಾಗಿ ಆಕಳು ನೀಡಿದ್ದಾರೆ.

ವರ್ಷಕ್ಕೆ 50 ರಿಂದ 60ಸಾವಿರ ರೂ. ಭತ್ತದ ಹುಲ್ಲು ಖರೀದಿಸುತ್ತಾರೆ. ಸುಗ್ಗಿಯಲ್ಲಿ ಗುಡ್ಡಗಳಲ್ಲಿ ಮೇಯಿಸಲು, ಬಿಡಿ ದಿನಗಳಲ್ಲಿ ಮಾಗಾಣಿ ಹೊಲ ಗದ್ದೆಗಳಲ್ಲಿ ಮೇಯಿಸಲು ಕರೆದೊಯ್ಯುತ್ತಾರೆ. ಕಾಲಕಾಲಕ್ಕೆ ಲಸಿಕೆ ಹಾಕಿಸುವುದು, ಸೊಳ್ಳೆಗಳಿಂದ ಕಾಪಾಡಲು ಪರದೆ ಕಟ್ಟುವುದು ಸೇರಿ ನಿಗಾವಹಿಸಲಾಗುತ್ತದೆ.

ಆಕಳ ಸೇವೆ ಮಾಡಿದರೆ ಮನುಷ್ಯನ ಆರೋಗ್ಯ ಚೆನ್ನಾಗಿರುತ್ತದೆ. ಈತನಕ ಜ್ವರ ಬಂದಿಲ್ಲ. ಐದು ಮಂದಿ ಸಹೋದರರೆಲ್ಲ ಸೇರಿ 20 ಜನರ ಕೂಡು ಕುಟುಂಬವಾಗಿದ್ದು ಆಕಳುಗಳನ್ನು ಎಲ್ಲರೂ ಪ್ರೀತಿಯಿಂದ ಜೋಪಾನ ಮಾಡುತ್ತೇವೆ. ಎರಡು ಎತ್ತು, 250 ಕುರಿಗಳನ್ನು ಸಾಕಿದ್ದೇವೆ.

ದನ, ಕುರಿಗಳನ್ನು ಕಾಯಲು ಐದು ಬೆಳಗಾವಿ ನಾಯಿಗಳನ್ನು ಸಾಕಿದ್ದೇವೆ.ಗೋವುಗಳ ಸಾಕಿ ಖುಷಿ ಕಂಡಿದ್ದೇವೆ. ನಮ್ಮ ಹೊಟ್ಟೆ ಸುಟ್ಟರೂ ಆಕಳ ಹೊಟ್ಟೆ ಸುಡಲು ಬಿಡುವುದಿಲ್ಲ ಎನ್ನುತ್ತಾರೆ ಗೋಪಾಲಕ ಗೊಲ್ಲರ ಭೀಮಪ್ಪ.

ದೇಸಿ ಆಕಳ ತಳಿ ರಕ್ಷಿಸುವ ಗೊಲ್ಲರ ಭೀಮಪ್ಪ ಆಶಯ ಅನುಕರಣೀಯವಾಗಿದೆ. ಪಶು ಇಲಾಖೆಯಿಂದ ಸಕಾಲಕ್ಕೆ ಆಕಳ ಆರೋಗ್ಯ ತಪಾಸಣೆ, ಚಿಕಿತ್ಸೆ, ಲಸಿಕೆ ನೀಡಲಾಗಿದೆ. ಅರ್ಧ ಎಕರೆಗೆ ಹುಲ್ಲಿನ ಬೀಜಗಳ ಕಿರು ಪೊಟ್ಟಣ ನೀಡಿದ್ದೇವೆ. ವಿಮೆ ಮಾಹಿತಿ ನೀಡಿದ್ದೇವೆ.| ಡಾ.ಡಿ.ಪ್ರದೀಪ್‌ಕುಮಾರ್, ವೈದ್ಯಾಧಿಕಾರಿ, ಪಶು ಚಿಕಿತ್ಸಾಲಯ, ಮೆಟ್ರಿ ದೇವಲಾಪುರದ ಆಕಳು ಚರಂಡಿ ನೀರು ಕುಡಿಯುತ್ತಿವೆ. ಹೈಸ್ಕೂಲ್ ಬಳಿ ಇರುವ ಕೊಟ್ಟಿಗೆಗೆ ನೀರು ತುಂಬಿಸಿದರೆ ದನಕರುಗಳಿಗೆ ಆಸರೆಯಾಗುತ್ತದೆ. ಕೊಟ್ಟಿಗೆ ನೀರು ತುಂಬಿಸಲು ಶಾಸಕರು, ಗ್ರಾಪಂ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶೆಡ್, ಕೊಟ್ಟಿಗೆ ನಿರ್ಮಾಣಕ್ಕೆ ಅರ್ಜಿ ಹಾಕಿದ್ದು ಮಂಜೂರಾತಿ ದೊರೆತಿಲ್ಲ.| ಗೊಲ್ಲರ ಭೀಮಪ್ಪ, ಗೋಪಾಲಕ, ದೇವಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net