

ಕಂಪ್ಲಿ: ಪಟ್ಟಣದ 23ನೇ ವಾರ್ಡ್‌ನ ಸೋಮೇಶ್ವರ ನಗರಕ್ಕೆ ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್.ಹನುಮಂತ ಮತ್ತು ಪುರಸಭೆ ಸಿಬ್ಬಂದಿ ಸೋಮವಾರ ಭೇಟಿ ನೀಡಿ ಮೂಲ ಸೌಕರ್ಯಗಳ ಪರಿಶೀನೆ ನಡೆಸಿದರು.
ವಾರ್ಡ್ ಸದಸ್ಯ ಹೂಗಾರ ರಮೇಶ್ ಮಾತನಾಡಿ, ಸೋಮೇಶ್ವರ ನಗರದಲ್ಲಿನ ಚರಂಡಿ ನೀರು ಹರಿದು ಹೋಗಲು ಸುತ್ತಲಿನ ಹೊಲ-ಗದ್ದೆಯವರು ಸಹಕರಿಸುತ್ತಿಲ್ಲ. ಇದರಿಂದ ಚರಂಡಿಯಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದೆ. ನಾನಾ ರೋಗಗಳು ಹರಡಲು ಕಾರಣವಾಗಿದೆ. ಚರಂಡಿ ನೀರನ್ನು ದೂರದ ಹಳ್ಳಕ್ಕೆ ಸಾಗಿಸಲು ಪೈಪ್‌ಲೈನ್ ಹಾಕಿಕೊಡುವಂತೆ ಒತ್ತಾಯಿಸಿದರು.
ಸೋಮೇಶ್ವರ ನಗರದಲ್ಲಿ ರೀಜರ್‌ಜಾಲಿ, ನಿರುಪಯುಕ್ತಗಿಡಗಳು ವಿಪರೀತ ಬೆಳೆದಿವೆ. ವಿಷಜಂತುಗಳು, ಸೊಳ್ಳೆಗಳ ಉಪಟಳ ಹೆಚ್ಚಿದೆ. ನಿರುಪಯುಕ್ತ ಗಿಡಗಳನ್ನು ತೆರವುಗೊಳಿಸಬೇಕು. ಕೊಳವೆಬಾವಿ ದುರಸ್ತಿ ಮಾಡಿಸಿ, ದಿನಬಳಕೆಗೆ ನೀರು ಒದಗಿಸಬೇಕು. ಸಿಸಿ ರಸ್ತೆ ನಿರ್ಮಾಣ ಒಳಗೊಂಡಂತೆ ನಾನಾ ಸೌಕರ್ಯಗಳನ್ನು ಒದಗಿಸುವಂತೆ ಅಲ್ಲಿನ ನಿವಾಸಿಗಳಾದ ಡಿ.ಈರಣ್ಣ, ಕುಡತಿನಿ ವೆಂಕಟೇಶಪ್ಪ, ಈರಣ್ಣ, ಅತ್ತರ್‌ಬೀ, ಸುರೇಶ್, ಶೇಖರ್, ಶಿವರಾಜ್, ಖಲಂದರ್ ಇತರರು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಮಾತನಾಡಿ, ಖಾಸಗಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ನೋಟಿಸ್ ನೀಡಲಾಗುವುದು. ರೀಜರ್‌ಜಾಲಿ, ನಿರುಪಯುಕ್ತ ಗಿಡಗಳ ತೆರವಿಗೆ, ಚರಂಡಿ ನೀರು ಮುಂದೆ ಸಾಗಲು ಮತ್ತು ಮೂಲ ಸೌಕರ್ಯ ಒದಗಿಸಲು ತಕ್ಕ ಕ್ರಮ ಕೈಗೊಳ್ಳುವುದು ಎಂದು ಭರವಸೆ ನೀಡಿದರು. ಜೆ.ಇ ಮೇಘನಾ, ಆರೋಗ್ಯ ನಿರೀಕ್ಷಕ ಪ್ರಕಾಶ್‌ಬಾಬು, ಸಹಾಯಕ ಆರೋಗ್ಯ ನಿರೀಕ್ಷಕಿ ಎ.ಕೆ.ರಾಧಿಕಾ, ಮೇಸ್ತ್ರಿ ವೆಂಕಟೇಶ್, ಓಬಳೇಶ್ ಇತರರಿದ್ದರು.