

ಕಂಪ್ಲಿ: ನೂತನ ಬಡಾವಣೆ ನಿರ್ಮಿಸಲು ಭೂಮಿಯನ್ನು ಖರೀದಿಸಬೇಕಿದ್ದು, ನೋಂದಣಿ ಕಚೇರಿ ಮೌಲ್ಯ ಹಾಗೂ ಮಾರುಕಟ್ಟೆಯಲ್ಲಿನ ಭೂಮಿಯ ಮೌಲಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ ಎಂದು ಕಂಪ್ಲಿ ಪಟ್ಟಣ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಜಿ.ವಿ.ಸತ್ಯನಾರಾಯಣ ತಿಳಿಸಿದರು.
ಪಟ್ಟಣದ ಸತ್ಯನಾರಾಯಣ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಂಪ್ಲಿ ಪಟ್ಟಣ ಗೃಹ ನಿರ್ಮಾಣ ಸಹಕಾರ ಸಂಘದ ವಿಶೇಷ ಮಹಾಜನ ಸಭೆಯಲ್ಲಿ ಮಾತನಾಡಿ, ಭೂಮಿ ಖರೀದಿಗೆ ತಾಂತ್ರಿಕ ತೊಂದರೆ ಎದುರಾಗಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡ ಸದಸ್ಯರು ಮಾತನಾಡಿ, ಲೆಕ್ಕಪರಿಶೋಧಕರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಾಂತ್ರಿಕ ತೊಂದರೆ ನಿವಾರಿಸಿ ಬಡಾವಣೆ ನಿರ್ಮಿಸುವಂತೆ ಒತ್ತಾಯಿಸಿದರು. ಸಭೆಯಲ್ಲಿ ಚರ್ಚಿಸಿ ನೂತನ ಬಡಾವಣೆ ನಿರ್ಮಿಸಲು ತೀರ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಡಿ.ಮೌನೇಶ, ಮುಖ್ಯಕಾರ್ಯನಿರ್ವಾಹಕ ದೇವೇಂದ್ರಪ್ಪ ಬಟಾರಿ, ಪದಾಧಿಕಾರಿಗಳಾದ ವ್ಯಾಸಾಚಾರ್, ಜಿ.ವಿ.ಆರ್.ಪ್ರಸಾದ್, ಕಟ್ಟೆ ಈರಮ್ಮ, ಡಿ.ಆದಿಲಕ್ಷ್ಮೀ, ಎಸ್.ಡಿ.ಬಸವರಾಜ, ಪ್ರಮುಖರಾದ ಟಿ.ಕೊಟ್ರೇಶ್, ಕೆ.ಸಣ್ಣ ಗವಿಸಿದ್ದಪ್ಪ, ವಾಲಿ ಕೊಟ್ರಪ್ಪ, ಡಿ.ವಿ.ಸುಬ್ಬಾರಾವ್, ಎಸ್.ಎಂ.ನಾಗರಾಜ, ಕಟ್ಟೆ ಮಾರೆಪ್ಪ ಸೇರಿ ಇತರರಿದ್ದರು.