

ಬಂಗಿ ದೊಡ್ಡಮಂಜುನಾಥ
ಕಂಪ್ಲಿ: ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಹಿಪ್ಪೆನೇರಳೆ ಬೆಳೆಗೆ ರಸ್ತೆ ಮಣ್ಣಿನ ಧೂಳು ಅಡರಿ ರೇಷ್ಮೆ ಬೆಳೆಗಾರರಿಗೆ ಸಂಕಷ್ಟ ತಂದಿದೆ. ಧೂಳಿನಿಂದ ಪಾರಾಗಲು ರೈತರೇ ರಸ್ತೆಗೆ ನೀರನ್ನು ಸಿಂಪಡಿಸುವ, ಹಿಪ್ಪೆನೇರಳೆ ತೊಪ್ಪಲನ್ನು ತೊಳೆಯುವ ಹೆಚ್ಚುವರಿ ಶ್ರಮ ಮತ್ತು ಖರ್ಚಿಗೆ ಈಡಾಗಿದ್ದಾರೆ.
ರಾಮಸಾಗರ ಹೊರವಲಯದ ಸಿದ್ದೇಶ್ವರ ಕ್ರಾಸ್‌ನಿಂದ ಕಣ್ವಿತಿಮ್ಮಲಾಪುರ ಗ್ರಾಮಕ್ಕೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿ ಕಳೆದ ಎರಡೂವರೆ ತಿಂಗಳಿಂದಲೂ ಕುಂಟುತ್ತ ಸಾಗಿದೆ. ರಸ್ತೆ ಕಾಮಗಾರಿ ಅಮೆಗತಿಯಲ್ಲಿ ಸಾಗಿದ್ದರಿಂದ ಧೂಳಿನ ಸಮಸ್ಯೆ ಹೆಚ್ಚಿದೆ. ಮಣ್ಣು ಸಾಗಿಸುವ ಟ್ರ್ಯಾಕ್ಟರ್, ವಾಹನಗಳು ಸಂಚರಿಸಿದಲ್ಲಿ ರಸ್ತೆ ಮೇಲಿನ ಧೂಳು ಹಿಪ್ಪೆನೇರಳೆ ಸೊಪ್ಪಿನ ಮೇಲೆ ಅಡರುತ್ತಿದೆ. ಎಲೆಯ ಗುಣಮಟ್ಟ ಕಲುಷಿತಗೊಳ್ಳುತ್ತದೆ. ರೇಷ್ಮೆಹುಳುಗಳು ಧೂಳಡರಿದ ಹಿಪ್ಪೆನೇರಳೆ ತೊಪ್ಪಲನ್ನು ತಿನ್ನದೆ ಸರಿಯಾಗಿ ಗೂಡು ಕಟ್ಟುತ್ತಿಲ್ಲ. ಇದರಿಂದ ಗುಣಮಟ್ಟದ ರೇಷ್ಮೆಗೂಡು ಸಿಗುತ್ತಿಲ್ಲ, ಜೊತೆಗೆ ಇಳುವರಿಯೂ ಕುಸಿತಗೊಳ್ಳುತ್ತಿದೆ.
ಧೂಳಿನ ಸಮಸ್ಯೆಯಿಂದ ಪಾರಾಗಲು ಹಿಪ್ಪೆನೇರಳೆ ಬೆಳೆದ ರೈತರು ಸ್ವತಃ ನಲ್ಲಿ ಹಾಕಿಕೊಂಡು ರಸ್ತೆ ಮೇಲೆ ನೀರು ಹರಿಸುವ ಹರಸಹಾಸಕ್ಕೆ ಮುಂದಾಗಿದ್ದಾರೆ. ಕೆಲ ರೈತರು ವಾಟರ್‌ಗನ್ ಮೂಲಕ ಹಿಪ್ಪೆನೇರಳೆ ಬೆಳೆಗೆ ನೀರು ಸಿಂಪಡಿಸುತ್ತಿದ್ದಾರೆ. ಇದರಿಂದ ಬೆಳೆ ನಿರ್ವಹಣೆ ಖರ್ಚು ಹೆಚ್ಚಲು ಕಾರಣವಾಗಿದೆ. ಕೆಲ ಹಿಪ್ಪೆನೇರಳೆ ಬೆಳೆಗಾರರು ನೀರಿನ ತೊಟ್ಟಿ ನಿರ್ಮಿಸಿಕೊಂಡು ತೊಪ್ಪಲನ್ನು ತೊಳೆದು ರೇಷ್ಮೆ ಹುಳುವಿಗೆ ಹಾಕುತ್ತಿದ್ದಾರೆ. ಎಷ್ಟು ತೊಳೆದರೂ ರೇಷ್ಮೆಹುಳು ತೊಪ್ಪಲವನ್ನು ತಿನ್ನದಿದ್ದರಿಂದ ರೇಷ್ಮೆ ಇಳುವರಿ, ಗುಣಮಟ್ಟದ ಮೇಲೆ ವ್ಯತಿರಿಕ್ತಪರಿಣಾಮ ಬೀರುತ್ತಿದೆ.
ಹಿಪ್ಪೆನೇರಳೆ ಬೆಳೆಯಲು ಎಕರೆಗೆ 40 ಸಾವಿರ ರೂ.ಗಳಷ್ಟು ವೆಚ್ಚಮಾಡಬೇಕಿದೆ. ಎಕರೆಗೆ ದ್ವಿತಳಿಯ (ಸಿಎಸ್‌ಆರ್) 200 ಮೊಟ್ಟೆಗಳಿಂದ ಕೇವಲ 30 ರಿಂದ 35 ಕೆಜಿಯಷ್ಟು ಇಳುವರಿ ದೊರಕುತ್ತದೆ. ವಾಸ್ತವದಲ್ಲಿ 100 ಮೊಟ್ಟೆಗೆ 100 ಕೆಜಿಯಷ್ಟು ಇಳುವರಿ ಸಿಗುತ್ತದೆ. ಧೂಳಿನ ಸಮಸ್ಯೆಯಿಂದ ಕೇವಲ 35 ಕೆಜಿಯಷ್ಟು ಇಳುವರಿಯಿಂದಾಗಿ ರೈತರಿಗೆ ನಷ್ಟದ ಹೊಡೆತ ಬೀಳುತ್ತಿದೆ. ಮೇಲಾಗಿ ರೇಷ್ಮೆಗೂಡಿನ ಬೆಳೆಯು ಕುಸಿತಗೊಂಡಿದ್ದು ಹಿಪ್ಪೆನೇರಳೆ ಬೆಳೆಗಾರರು ಚಿಂತಿತರಾಗಿದ್ದಾರೆ.
ರಸ್ತೆಗೆ ಕನಿಷ್ಠ ಎರಡು ಬಾರಿ ನೀರು ಸಿಂಪಡಿಸುವಂತೆ ಗುತ್ತಿಗೆದಾರರನ್ನು ಕೋರಿಕೊಂಡರೂ ಪ್ರಯೋಜನವಾಗಿಲ್ಲ. ರೇಷ್ಮೆ ಇಲಾಖೆ ನಷ್ಟಪರಿಹಾರ ನೀಡುವಲ್ಲಿ ಮುಂದಾಗಬೇಕಿದೆ ಎಂದು ರೇಷ್ಮೆಬೆಳೆಗಾರರಾದ ಬೇವಿನಹಳ್ಳಿ ಶಂಕ್ರಪ್ಪ, ವೀರೇಶ್, ಜಂತಕಲ್ ವಿರುಪಾಕ್ಷಪ್ಪ ಇತರರು ಒತ್ತಾಯಿಸಿದ್ದಾರೆ.
ಧೂಳಿನ ಸಮಸ್ಯೆಯಿಂದ ರೇಷ್ಮೆಗೂಡಿನ ಇಳುವರಿ ಕುಂಠಿತವಾಗಿದೆ. ತೊಪ್ಪಲು ತೊಳೆಯಲು ಹೆಚ್ಚಿನ ಖರ್ಚು ಮಾಡಬೇಕು. ರಸ್ತೆಗೆ ನಾವೇ ನೀರು ಸಿಂಪಡಿಸಿಕೊಳ್ಳಲು ಪೈಪ್ ಹಾಕಿ ನೀರು ಹರಿಸುತ್ತೇವೆ. ಆದರೂ ಧೂಳು ಸಮಸ್ಯೆ ನಿಯಂತ್ರಣಗೊಂಡಿಲ್ಲ. ರೇಷ್ಮೆ ಗೂಡಿನ ಬೆಲೆ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೇಷ್ಮೆ ಇಲಾಖೆ ನಷ್ಟಪರಿಹಾರ ನೀಡುವಲ್ಲಿ ಮುಂದಾಗಬೇಕು. | ಬೇವಿನಹಳ್ಳಿ ಭೀಮಪ್ಪ ಹಿಪ್ಪೆನೇರಳೆ ಬೆಳೆಗಾರ, ಕಣ್ವಿ ತಿಮ್ಮಲಾಪುರ ರಾಮಸಾಗರ ಭಾಗದಲ್ಲಿ 60 ರೈತರು ಸಮಾರು 150 ಎಕರೆ ಹಿಪ್ಪೆನೇರಳೆ ಬೆಳೆಯುತ್ತಿದ್ದಾರೆ. ಕಣ್ವಿ ತಿಮ್ಮಲಾಪುರ ರಸ್ತೆಯಲ್ಲಿ 15 ಜನ 40ಎಕರೆಯಲ್ಲಿ ಹಿಪ್ಪೆ ನೇರಳೆ ಬೆಳೆಯುತ್ತಿದ್ದಾರೆ. ಧೂಳಿನ ಸಮಸ್ಯೆ ನಿಯಂತ್ರಣಕ್ಕೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. | ಪ್ರಾಣೇಶರಾವ್ ರೇಷ್ಮೆ ಸಹಾಯಕ ಕೃಷಿ ನಿರ್ದೇಶಕ, ಕೂಡ್ಲಿಗಿ ಧೂಳು ನಿಯಂತ್ರಣಕ್ಕೆ ಸಮರ್ಪಕವಾಗಿ ನೀರು ಸಿಂಪಡಿಸುವಂತೆ, ತುರ್ತಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರನಿಗೆ ಸೂಚಿಸಲಾಗುವುದು. |ಗೌಸಿಯಾಬೇಗಮ್ ತಹಸೀಲ್ದಾರ್, ಕಂಪ್ಲಿ