ಜಿಟಿ ಜಿಟಿ ಮಳೆಗೆ ಕಂಗೆಟ್ಟ ರೈತರು; ಭತ್ತ, ಮೆಣಸಿನಕಾಯಿ, ಹತ್ತಿ ಬೆಳೆದವರಿಗೆ ಚಿಂತೆ

13092020 Kampli pady
Published on

ಕಂಪ್ಲಿ: ತಾಲೂಕಿನಲ್ಲಿ ಶನಿವಾರ 72.6 ಮಿಮೀ ಮಳೆಯಾಗಿದೆ. ಜಿಟಿ ಜಿಟಿ ಮಳೆಯಿಂದ ರೈತರು ರೋಸಿ ಹೋಗಿದ್ದಾರೆ. ಮೂರ‌್ನಾಲ್ಕು ದಿನಗಳಿಂದ ಮಳೆ ಬೀಳುತ್ತಿದ್ದು, ಹೀಗೆ ಮುಂದುವರಿದರೆ ಬೆಳೆಗಳಿಗೆ ಮಾರಕವಾಗಲಿದೆ.

ತುಂಗಭದ್ರಾ ನದಿ ಪಾತ್ರದ ಹಾಗೂ ವಿಜಯನಗರ ಕಾಲುವೆ ವ್ಯಾಪ್ತಿಯ ಕಂಪ್ಲಿ, ಬೆಳಗೋಡುಹಾಳ್, ಸಣಾಪುರ, ಇಟಗಿ, ನಂ.2ಮುದ್ದಾಪುರ ಭಾಗಗಳ ಸುಮಾರು 3,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತ ಕಾಳು ಹಾಲು ತುಂಬಿ ಕೆಂಪಡರಿದ ಹಂತದಲ್ಲಿದ್ದು, ಇನ್ನು 20 ದಿನಗಳಲ್ಲಿ ಕೊಯ್ಲಿಗೆ ಬರಲಿದೆ. ಮಳೆ ಮುಂದುವರೆದಲ್ಲಿ ಭತ್ತದ ಜತೆಗೆ ಮೆಣಸಿನಕಾಯಿ, ಹತ್ತಿ, ಮೆಕ್ಕೆಜೋಳ ಬೆಳೆ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುವ ಚಿಂತೆ ರೈತರನ್ನು ಕಾಡುತ್ತಿದೆ.

ಶೇಂಗಾ ಹೊಲದಲ್ಲಿ ನಿಂತ ನೀರು: ಹೂವಿನಹಡಗಲಿ ತಾಲೂಕಿನಲ್ಲಿ 12.6 ಮಿಮೀ ಮಳೆಯಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಹಿರೇಮಲ್ಲನಕೇರಿ ಗ್ರಾಮದಲ್ಲಿ ಜೋಳದ ಬೆಳೆ ನೆಲಕಕ್ಕೆ ಬಿದ್ದು, ಬೆಳೆ ನಾಶವಾಗಿದೆ. ಹೊಳಗುಂದಿ, ಬಾವಿಹಳ್ಳಿ, ಮಾನ್ಯರ ಮಸಲವಾಡ ಗ್ರಾಮಗಳ ರೈತರ ಜಮೀನಿನಲ್ಲಿ ಮಳೆ ನೀರು ನಿಂತು ಹಾನಿಯಾಗಿದೆ. ಜಿಟಿ ಜಿಟಿ ಮಳೆಯಿಂದ ಈಗಾಗಲೇ ಕಟಾವಿಗೆ ಬಂದಿದ್ದ ಮೆಕ್ಕೆಜೋಳ, ಶೇಂಗಾ ಬೆಳೆಗಳಲ್ಲಿ ನೀರು ನಿಂತಿದೆ. ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ಒಂದು ಮನೆ ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net