ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪಲಿ - ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್ ಸೂಚನೆ

KAMPLI 02
ಕಂಪ್ಲಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಮಾತನಾಡಿದರು. ತಾಪಂ ಇಒ ಆರ್.ಕೆ.ಶ್ರೀಕುಮಾರ್, ಸಹಾಯಕ ನಿರ್ದೇಶಕ (ನರೇಗಾ) ಕೆ.ಎಸ್.ಮಲ್ಲನಗೌಡ ಇದ್ದರು.
Published on

ಕಂಪ್ಲಿ; ತಾಲೂಕಿನ ಎಲ್ಲ ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂದು ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್ ಹೇಳಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಗೃಹಜ್ಯೋತಿ ಯೋಜನೆ ಕುರಿತು ಜೆಸ್ಕಾಂ ಎಇಇ ಮಲ್ಲಿಕಾರ್ಜುನಗೌಡ, ಎಇ ಭೀಮೇಶ್ ಮಾತನಾಡಿ, ಒಟ್ಟು 23,482ನೋಂದಾಯಿತ ವಿದ್ಯುತ್ ಗ್ರಾಹಕರಿದ್ದು, 1,10,18,083ರೂ. ಆದಾಯ ಬಂದಿದೆ. ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ 1912, ನಗರದ ವಿದ್ಯುತ್ ಸಮಸ್ಯೆಗಳಿಗೆ ಮೊಬೈಲ್ ಸಂಖ್ಯೆ 9480845104ಕ್ಕೆ ದೂರು ಸಲ್ಲಿಸುವಂತೆ ಮಾಹಿತಿ ನೀಡಿದರು.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಮಾಲೋಚಕ ವೆಂಕಟೇಶ್ ಮಾತನಾಡಿ, ಯವನಿಧಿ ಯೋಜನೆಯಡಿ 352 ಪುರುಷರು, 334 ಮಹಿಳೆಯರು ಸೇರಿ ಒಟ್ಟು 686 ಜನ ನೋಂದಾಯಿಸಿಕೊಂಡಿದ್ದು, ಜ.2025ರ ತನಕ 71,59,500 ರೂ.ನೀಡಲಾಗಿದೆ. ತಾಂತ್ರಿಕ ದೋಷದಿಂದಾಗಿ ನೋಂದಣಿಗೆ ತೊಂದರೆಯಾಗಿದ್ದು, ತ್ವರಿತವಾಗಿ ಸರಿಪಡಿಸಲಾಗುವುದು ಮಾಹಿತಿ ನೀಡಿದರು.

ಶಕ್ತಿ ಯೋಜನೆ ಕುರಿತು ಕುರುಗೋಡು ಡಿಪೋ ಮ್ಯಾನೇಜರ್ ಚಂದ್ರಶೇಖರ್ ಮಾತನಾಡಿ, ಕಂಪ್ಲಿ-ಕುರುಗೋಡು ಸೇರಿ 39,06,807 ಮಹಿಳೆಯರು, 1,46,276 ವಿದ್ಯಾರ್ಥಿನಿಯರು ಸಂಚರಿಸಿದ್ದು, ಒಟ್ಟು 17,19,50,198 ರೂ.ಆದಾಯ ಬಂದಿದೆ ಎಂದು ಮಾಹಿತಿ ನೀಡಿದರು.

ಡಿಪ್ಲೊಮಾ ಕಾಲೇಜು ಹಾಗೂ ನದಿ ಸೇತುವೆ ಬಳಿ ಬಸ್‌ಗಳನ್ನು ನಿಲುಗಡೆಗೊಳಿಸಬೇಕು. ವಿದ್ಯಾರ್ಥಿಗಳಿಗಾಗಿ ನಿಗದಿತ ಸಮಯಕ್ಕೆ, ರಾತ್ರಿ 8.30ಕ್ಕೆ ಕಂಪ್ಲಿಯಿಂದ ಬಳ್ಳಾರಿಗೆ ಬಸ್ ಸಂಚಾರ ಹಾಗೂ ಮಹಿಳೆಯರು ಹಾಗೂ ವಿದ್ಯಾರ್ಥಿಗಳನ್ನು ನೋಡಿದ ಕೂಡಲೇ ಹಾಗೆಯೇ ಹೋಗುವ ಚಾಲಕ, ನಿರ್ವಾಹಕರ ವಿರುದ್ಧ ಕ್ರಮವಹಿಸಿ ಎಂದು ಸದಸ್ಯರು ಒತ್ತಾಯಿಸಿದರು.

ಆಹಾರ ನಿರೀಕ್ಷಕ ಬಿ.ವಿರುಪಾಕ್ಷಗೌಡ ಮಾತನಾಡಿ, ತಾಲೂಕಿನಲ್ಲಿ 2,793 ಅಂತ್ಯೋದಯ, 26,080 ಬಿಪಿಎಲ್, 4,550 ಎಪಿಎಲ್ ಪಡಿತರ ಚೀಟಿಗಳಿವೆ ಹಾಗೂ 3,94,423 ಪಡಿತರದಾರರಿಗಾಗಿ 23.66 ಕೋಟಿ ರೂ. ಅನುದಾನ ಬಳಕೆಯಾಗಿದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆ ಕುರಿತು ಎಸಿಡಿಪಿಒ ಮೋಹನ್ ಎಸ್.ಕಾಳಾಪುರ ಮಾಹಿತಿ ನೀಡಿ, ತಾಲೂಕಿನಲ್ಲಿ 3,45,297 ಫಲಾನುಭವಿಗಳಿಗೆ ಒಟ್ಟಾರೆ 69,05ಕೋಟಿ ರೂ. ನೀಡಲಾಗಿ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net