

ಕಂಪ್ಲಿ: ವೈದಿಕ ಆಚರಣೆ ನೆಪದಲ್ಲಿ ಸುಲಿಗೆ ಮಾಡುವವರ ಬಗ್ಗೆ ಎಚ್ಚರಿಕೆ ಅಗತ್ಯವಿದೆ ಎಂದು ನಂ.3 ಸಣಾಪುರದ ಸಾಮಾನ್ಯ ಕೇಂದ್ರದ (ಗ್ರಾಮಒನ್) ಪ್ರತಿನಿಧಿ ಗವಿವೀರನಗೌಡ ಹೇಳಿದರು.
ಇಲ್ಲಿನ ಗಂಗಾಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಶನಿವಾರ ಹಮ್ಮಿಕೊಂಡಿದ್ದ 173ನೇ ಮಹಾಮನೆ ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದರು. ವೈದಿಕ ಆಚರಣೆಯ ನೆಪದಲ್ಲಿ ಮೂಢನಂಬಿಕೆ, ಅಜ್ಞಾನಗಳಿಗೆ ಈಡಾಗಬಾರದು. ಒಳಗಿನ ವೈರಿಗಳಿಗಿಂತ ಹೊರಗಿನ ವೈರಿಗಳ ಪ್ರಭಾವವೇ ಹೆಚ್ಚಾಗಿದ್ದು, ಇದರಿಂದ ಪಾರಾಗಲು ಶರಣ ಸಂಸ್ಕೃತಿ ಅನುಸರಣೆ ಅಗತ್ಯವಿದೆ. ಚೈತನ್ಯವೇ ಶಿವವಾಗಿದ್ದು ಒಳಗಿನ ಚೈತನ್ಯವನ್ನು ಪ್ರೇರಣೆಗೊಳಿಸಲು ವಚನ ಸಾಹಿತ್ಯ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯಶಿಕ್ಷಕ ಕೆ.ಚಂದ್ರಶೇಖರ್‌ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಶಾಂತಿ, ನೆಮ್ಮದಿ, ಆರೋಗ್ಯ ಕಳೆದುಕೊಂಡು ಹಣದ ಬೆನ್ನತ್ತಿರುವುದು ಒಂದೆಡೆಯಾದರೆ, ಹಣವುಳ್ಳವರು ಶಾಂತಿ, ನೆಮ್ಮದಿ, ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿರುವುದು ವಿಪರ್ಯಾಸ ಎಂದರು.
ಲಿಂಗಾಯತ ಮಹಾಸಭಾದ ತಾಲೂಕು ಪದಾಧಿಕಾರಿ ಬಿ.ಎಂ.ರುದ್ರಯ್ಯ, ಹಡಪದ ಅಪ್ಪಣ್ಣ ಸಮಾಜದ ತಾಲೂಕು ಉಪಾಧ್ಯಕ್ಷ ಅಶೋಕ ಕುಕನೂರು, ಪರಿಷತ್ ತಾಲೂಕು ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ತೆಂಗಿನಕಾಯಿ ತಿಪ್ಪೇಸ್ವಾಮಿ, ಮಡಿವಾಳ ಹುಲುಗಪ್ಪ, ಸಜ್ಜೇದ ವೀರಭದ್ರಪ್ಪ, ಅಂಬಿಗರ ಮಂಜುನಾಥ, ಕೆ.ಯಂಕಾರೆಡ್ಡಿ, ಎಸ್.ರಾಮಪ್ಪ, ಎನ್.ಶಂಕ್ರಪ್ಪ, ಸುರೇಶ ಮರಿಶೆಟ್ರು, ಸಂತೋಷ್ ಕೊಟ್ರಪ್ಪ ಸೋಗಿ ಇತರರಿದ್ದರು.