

ಕಂಪ್ಲಿ: ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಪಂ ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ತಾಪಂ ಸಹಾಯಕ ನಿರ್ದೇಶಕಿ ಅಪರಂಜಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ನೆಲ್ಲೂಡಿ ರಾಜ ಮಾತನಾಡಿ, ಗ್ರಾಪಂ.ನೌಕರರಿಗೆ ಕನಿಷ್ಠ ವೇತನ 31 ಸಾವಿರ ರೂ. ನಿಗದಿಗೊಳಿಸಬೇಕು. ಪ್ರತಿ ಗ್ರಾಪಂಗೆ ಲೆಕ್ಕ ಸಹಾಯಕ, ಎರಡನೇ ಡಿಇಒ ನೇಮಿಸಬೇಕು. ಆರೋಗ್ಯ ವಿಮೆ ಜಾರಿಗೊಳಿಸಬೇಕು.
ಸ್ವಚ್ಛವಾಹಿನಿಯರ ಒಡಂಬಡಿಕೆಯನ್ನು ರದ್ದುಗೊಳಿಸಿ, ತರಬೇತಿ ಪಡೆದ ಎಲ್ಲರಿಗೂ ಕೆಲಸ ನೀಡಿ, 7500 ರೂ. ಗೌರವಧನ ನೀಡಬೇಕು. ಸಿಂಗಲ್ ನೌಕರರನ್ನು ಪರಿಗಣಿಸಿ 15 ಸಾವಿರ ರೂ. ಗೌರವಧನ ಒದಗಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಎಚ್.ಎಂ.ಜಡೆಯ್ಯಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಚಾಂದ್‌ಬಾಷ, ಪದಾಧಿಕಾರಿಗಳಾದ ಚಂದ್ರಶೇಖರಗೌಡ, ವೈ.ರಾಜಶೇಖರರೆಡ್ಡಿ, ಪೀರಾಸಾಬ್, ಗ್ರಾಪಂ ಪಂಪ್ ಆಪರೇಟರ್, ಜವಾನ, ನೀರಗಂಟಿಗಳು, ಕಂಪ್ಯೂಟರ್ ಆಪರೇಟರ್ಸ್, ಕರವಸೂಲಿಗಾರರು ಇದ್ದರು.