ಡಿಪ್ಲೊಮಾ ಕಾಲೇಜಿಗೆ ಬಸ್ ಸೌಲಭ್ಯ ಭರವಸೆ

MANAVI
ಕಂಪ್ಲಿಯ ಸರ್ಕಾರಿ ಡಿಪ್ಲೊಮಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಶಾಸಕ ಜೆ.ಎನ್.ಗಣೇಶ್ ಚರ್ಚಿಸಿದರು. ಪ್ರಾಚಾರ್ಯ ಪಿ.ಎಸ್.ಬಾಲಾಂಜನೇಯಲು, ಎಚ್‌ಒಡಿಗಳಾದ ಕೆ.ರಾಮಾಂಜನೇಯ, ವಿಶ್ವನಾಥಗೌಡ, ಪ್ರಮುಖ ಬಿ.ಜಾಫರ್ ಇತರರಿದ್ದರು.
Published on

ಕಂಪ್ಲಿ: ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿ ಕಡ್ಡಾಯವಾಗಿ ಬಸ್ ನಿಲುಗಡೆಗೊಳಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಶಾಸಕ ಜೆ.ಎನ್.ಗಣೇಶ್ ಭರವಸೆ ನೀಡಿದರು.

ಸ್ಥಳೀಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಬುಧವಾರ ಮಾತನಾಡಿದ ಅವರು, ಡಿಪ್ಲೊಮಾ ಕಾಲೇಜು ಬಳಿ ಬಸ್ ತಂಗುನಿಲ್ದಾಣ ನಿರ್ಮಿಸಲಾಗುವುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಸಕರ ಅನುದಾನದಡಿ ಬಸ್‌ಸೌಲಭ್ಯ ಒದಗಿಸಲಾಗುವುದು.

ಬಸ್ ನಿರ್ವಹಣೆಯನ್ನು ಕಾಲೇಜು ನಿರ್ವಹಿಸುವಲ್ಲಿ ಮುಂದಾಗಬೇಕು. ಅಲ್ಲದೆ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಕೋರ್ಸ್ ಆರಂಭಕ್ಕೆ ತಾಂತ್ರಿಕ ಶಿಕ್ಷಣ ಇಲಾಖೆ ಕಮೀಷನರ್‌ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹಂಪಾದೇವನಹಳ್ಳಿಯ 20ಎಕರೆಯಲ್ಲಿ ಏಕಲವ್ಯ ಶಾಲೆಗಾಗಿ ಪ್ರಸ್ತಾವನೆ ಸಲ್ಲಿಸಿದೆ. ಎಚ್.ವೀರಾಪುರದಲ್ಲಿ ಕಿತ್ತೂರು ರಾಣಿಚನ್ನಮ್ಮ ಶಾಲೆ ಆರಂಭಿಸಲು 12ಎಕರೆ ಜಾಗ ಮೀಸಲಿರಿಸಲಾಗಿದೆ. ದೇವಸಮುದ್ರ, ದಮ್ಮೂರು, ಸಿದ್ದಮ್ಮನಹಳ್ಳಿಗಳಲ್ಲಿ ಪಿಯು ಕಾಲೇಜು ಆರಂಭಗೊಳ್ಳಿವೆ ಎಂದು ತಿಳಿಸಿದರು.

ಡಿಪ್ಲೊಮಾ ಕಾಲೇಜು ಬಳಿ ಪರಿಶಿಷ್ಟ ಜಾತಿ, ಪಂಗಡಗಳ ಬಾಲಕರ ನಿಲಯ ನಿರ್ಮಾಣ, ನಂ.10ಮುದ್ದಾಪುರ, ದೇವಸಮುದ್ರ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಿದರು.

ಪ್ರಾಚಾರ್ಯ ಪಿ.ಎಸ್.ಬಾಲಾಂಜನೇಯಲು, ಪ್ರಮುಖರಾದ ಕೆ.ಶ್ರೀನಿವಾಸರಾವ್, ಗ್ರಾಪಂ ಅಧ್ಯಕ್ಷರಾದ ಸೋಮೇಶ್ವರಿ, ನಾಯಕರ ಮಾಯಮ್ಮ, ಉಪಾಧ್ಯಕ್ಷೆ ಜಡೆ ಸಾವಿತ್ರಮ್ಮ, ಬಳ್ಳಾರಿ ಮಾಧವ, ಕೆ.ಷಣ್ಮುಖಪ್ಪ, ನಾಯಕರ ವೆಂಕೋಬಾ, ಕೋರಿ ಚನ್ನಬಸವ, ಪಿಡಿಒಗಳಾದ ಶಿಲ್ಪಾರಾಣಿ, ಸಾವಿತ್ರಿ ಗೌರೋಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net