

ಕಂಪ್ಲಿ: ತುಂಗಭದ್ರಾ ಜಲಾಶಯದ ಹೊರಹರಿವು ತಗ್ಗಿದ್ದರಿಂದ ಗಂಗಾವತಿ-ಕಂಪ್ಲಿ ಸೇತುವೆ ವಾಹನಗಳ ಸಂಚಾರಕ್ಕೆ ಗುರುವಾರ ಮುಕ್ತಗೊಂಡಿತು.
ಬುಧವಾರ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದರಿಂದ ಸೇತುವೆ ಮೇಲೆ ನೀರು ಹರಿದು ವಾಹನ ಸಂಚಾರ ನಿಷೇಧಿಸಲಾಗಿತ್ತು. ನದಿಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಸಾರಿಗೆ ಬಸ್ ಸೇರಿ ವಿವಿಧ ವಾಹನಗಳು ಸಂಚರಿಸಿದವು. ಸೇತುವೆಯ ರಕ್ಷಣಾ ಕಂಬಿಗಳಿಗೆ ಸಿಲುಕಿದ್ದ ಜಲಸಸ್ಯಗಳನ್ನು ಪುರಸಭೆ ಸಿಬ್ಬಂದಿ ಜೆಸಿಬಿ ಮೂಲಕ ತೆರವುಗೊಳಿಸಿ ಜನರ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರವಾಹ ಭೀತಿಯಲ್ಲಿದ್ದ ನದಿ ತೀರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಬುಧವಾರ ಸಂಚಾರ ನಿಷೇಧದಿಂದ ರೈತರು, ಕಾರ್ಮಿಕರು ಕಡೆಬಾಗಿಲು ಸೇತುವೆ ಬಳಸಿ ಕಂಪ್ಲಿ ಮತ್ತು ಗಂಗಾವತಿಗೆ ತೆರಳುವಂತಾಗಿತ್ತು.
ಜಲಸಸ್ಯ ತೆರವು ವೇಳೆ ಪುರಸಭೆ ಪರಿಸರ ಇಂಜಿನಿಯರ್ ಜಿ.ಆರತಿ, ಆರೋಗ್ಯ ನಿರೀಕ್ಷಕರಾದ ಪ್ರಕಾಶ್ ಬಾಬು, ಎ.ಕೆ.ರಾಧಿಕಾ, ಸಮುದಾಯ ಸಂಘಟಕಿ ಎಂ.ವಸಂತಮ್ಮ ಇತರರಿದ್ದರು.