

ಬಂಗಿ ದೊಡ್ಡಮಂಜುನಾಥ
ಕಂಪ್ಲಿ: ಇಲ್ಲಿನ ಕೋಟೆ ಮೀನುಗಾರರು ಸಿದ್ಧಪಡಿಸುವ ಹರಿಗೋಲು ಬುಟ್ಟಿಗಳಿಗೆ ವಿಶೇಷ ಬೇಡಿಕೆ ಸೃಷ್ಟಿಯಾಗಿದ್ದು, ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಕಳುಹಿಸಿಕೊಡಲಾಗುತ್ತದೆ.
ನಾನಾ ಉದ್ದೇಶಗಳಿಗೆ ಬಳಸುವ ಬುಟ್ಟಿಗಳನ್ನು ಹರಿಗೋಲು ಬುಟ್ಟಿ ಅಥವಾ ತೆಪ್ಪ, ದೋಣಿಗಳೆಂದು ಕರೆಯುತ್ತಾರೆ. ಈ ಬುಟ್ಟಿಗಳನ್ನು ತಯಾರಿಸುವಲ್ಲಿ ಕಂಪ್ಲಿ ಕೋಟೆ ಮೀನುಗಾರರು ಮುಂಚೂಣಿಯಲ್ಲಿದ್ದಾರೆ. ಬಿದಿರು, ಪೇಪರ್, ಡಾಂಬರ್, ಬಟ್ಟೆ, ತಾಡಪಾಲು, 2 ಎಂ.ಎಂ. ಪ್ಲಾಸ್ಟಿಕ್ ದಪ್ಪನೆಯ ದಾರ, ಗೊಬ್ಬರ ಚೀಲ ಮತ್ತು ಸ್ಥಳೀಯವಾಗಿ ದೊರಕುವ ವಸ್ತುಗಳನ್ನು ಬಳಸಿ ಐದಾರು ತಾಸಿನಲ್ಲಿ ಒಂದು ಬುಟ್ಟಿ ಕೇವಲ ಇಬ್ಬರು ತಯಾರಿಸಬಲ್ಲರು.
ಐದೂವರೆ ಅಡಿಯಿಂದ ಹದಿನಾಲ್ಕು ಅಡಿ ವ್ಯಾಸದ ಮೂರು ಮಾದರಿಯ ಬುಟ್ಟಿಗಳನ್ನು ಮಿನುಗಾರರು ತಯಾರಿಸುತ್ತಾರೆ. ನದಿ, ಸಮುದ್ರ, ಸ್ವಿಮ್ಮಿಂಗ್‌ಪೂಲ್‌ಗಳಲ್ಲಿ ಜನರನ್ನು ಸುತ್ತಾಡಿಸಲು ಕೊರೇಕಲ್ ಬುಟ್ಟಿಯನ್ನು ಬಳಸುತ್ತಾರೆ. ಗೋವಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ರೌಂಡ್ಸ್‌ಗಾಗಿ ಇಲ್ಲಿನ ಕೊರೇಕಲ್ ಬುಟ್ಟಿ ಬಳಸುವುದುಂಟು. ಮೀನು ಬೇಟೆಗಾಗಿ ಎರಡು ಅಡಿ ಎತ್ತರ ಮತ್ತು ಆರು ಅಡಿ ವ್ಯಾಸದ ಬುಟ್ಟಿ ಬಳಸುತ್ತಾರೆ.
ಹೊಳೆ ದಾಟಲು ಘಾಟ್ ಬುಟ್ಟಿಗಳನ್ನು ಬಳಸುತ್ತಾರೆ. ಅಲ್ಲದೆ ಮನುಷ್ಯರ ಸಾಗಣೆಗೆ, ದ್ವಿಚಕ್ರ ವಾಹನಗಳ ಸಾಗಣೆಗೆ ಘಾಟ್ ಬುಟ್ಟಿ ಸೂಕ್ತ. ಈ ಮೂರು ರೀತಿಯ ಬುಟ್ಟಿಗಳನ್ನು ಬೇಡಿಕೆಯಂತೆ ತಯಾರಿಸಿ ಕೊಡಲಾಗುತ್ತದೆ. 25 ರಿಂದ 35 ಕೆಜಿ ತನಕ ತೂಗುವ ಬುಟ್ಟಿಗಳು ಮೂರೂವರೆ ಕ್ವಿಂಟಾಲ್ ಭಾರ ಸಹಿಸಬಲ್ಲವು. ಕೊರೇಕಲ್ ಬುಟ್ಟಿ 5-15 ಸಾವಿರ ರೂ., ಮೀನು ಬುಟ್ಟಿ ಆರು ಸಾವಿರ ರೂಪಾಯಿ, ಘಾಟ್ ಬುಟ್ಟಿ 15 ಸಾವಿರ ರೂ.ಯಿಂದ 25 ಸಾವಿರ ರೂ.ವರೆಗೆ ಬೆಲೆ ಇದೆ. ಇಲ್ಲಿನ ಬುಟ್ಟಿಗಳನ್ನು ತುಂಗಭದ್ರಾ ನದಿ ಪಾತ್ರದ ಮೀನುಗಾರರು ಕೊಳ್ಳುತ್ತಾರೆ. ಅಲ್ಲದೆ, ಆಲಮಟ್ಟಿ ಜಲಾಶಯ, ಬಾಗಲಕೋಟೆ, ಜಮಖಂಡಿ, ವಿಜಯಪುರ, ರಾಯಚೂರು, ತಿಂಥಿಣಿ ಬ್ರಿಡ್ಜ್, ಹಡಗಲಿ, ಹರಪನಹಳ್ಳಿ, ನೆರೆ ರಾಜ್ಯದ ಅನಂತಪುರ, ಮಂತ್ರಾಲಯಗಳಿಗೂ ರವಾನೆ ಮಾಡುತ್ತಾರೆ.
ಕೋಟೆಯಲ್ಲಿ ಆರೇಳು ಕುಟುಂಬಗಳು ಬುಟ್ಟಿ ತಯಾರಿಸುತ್ತವೆ. ಪ್ರತಿ ತಿಂಗಳಿಗೆ ಐವತ್ತು ಬುಟ್ಟಿ ತಯಾರಾಗುತ್ತಿವೆ. ಬುಟ್ಟಿಗಳಿಗೆ ಆರು ತಿಂಗಳು ಗ್ಯಾರಂಟಿಯೂ ಇದೆ. ಸರಿಯಾಗಿ ಬಳಸಿಕೊಂಡರೆ ಒಂದು ವರ್ಷಕ್ಕೂ ಮಿಗಿಲಾಗಿ ಬಾಳಿಕೆ ಬರುತ್ತವೆ. ಬುಟ್ಟಿಗಳ ದುರಸ್ತಿ ಕೂಡ ಇಲ್ಲಿ ಮಾಡಿಕೊಡಲಾಗುತ್ತಿದೆ.
ಎಂ.ಪ್ರಿಯಾಂಕಾ ಹೆಸರಿನ ಮೀನುಗಾರ ಕುಟುಂಬದ ಮಹಿಳೆ ಧರ್ಮಸ್ಥಳ ಗುಂಪಿನಿಂದ ಎರಡು ಲಕ್ಷ ರೂ. ಸಾಲ ಪಡೆದು, ಮೀನುಗಾರಿಕೆಯ ಸಾಮಾನು ಮಾರಾಟ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಒಂದು ಬೊಟ್ಟಿನಿಂದ ಎಂಟು ಬೊಟ್ಟಿನ ತನಕದ ಮೀನು ಬಲೆ, ಗಾಣ, ಬೆಂಡು, ಸೀಸ ಸೇರಿ ಮೀನುಗಾರಿಕೆ ಬೇಟೆಗೆ, ಬುಟ್ಟಿ ತಯಾರಿಕೆಗೆ ಬೇಕಾದ ಎಲ್ಲ ವಸ್ತುಗಳು ಸಿಗುತ್ತವೆ.
ಬಿದಿರಿನ ತೊಂದರೆ ಇದೆ. ಕಾರವಾರ, ಅಂಕೋಲಾ ಭಾಗಗಳಿಂದ ಬಿದಿರು ತರಲಾಗುತ್ತದೆ. ಬಿದಿರು ಸೇರಿ ಬುಟ್ಟಿ ತಯಾರಿಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಬುಟ್ಟಿ ತಯಾರಕರಿಗೆ ಸಾಲ ಸೌಲಭ್ಯದ ಅಗತ್ಯವಿದೆ. ಬುಟ್ಟಿ ಸಾಗಣೆ ಸಂದರ್ಭದಲ್ಲಿ ಪೊಲೀಸರ ಕಿರಿಕಿರಿ ತಪ್ಪಿಸಲು ಬುಟ್ಟಿ ತಯಾರಕರಿಗೆ ಲೈಸೆನ್ಸ್ ನೀಡಬೇಕಿದೆ.| ಕೆ.ಐ.ಮುರುಗೇಶನ್ ಬುಟ್ಟಿ ತಯಾರಕ, ಕಂಪ್ಲಿ ಕೋಟೆ
ಹೊಳೆ ಬಂದಾಗ, ನದಿಯಲ್ಲಿ ನೀರು ಇಲ್ಲದಾಗ ಮೀನುಗಾರ ಕುಟುಂಬಗಳಿಗೆ ಕೆಲಸ ಇಲ್ಲದೆ ನಾಲ್ಕು ತಿಂಗಳು ಆರ್ಥಿಕ ತೊಂದರೆಯಾಗುತ್ತದೆ. ಮೀನುಗಾರಿಕೆ ಇಲಾಖೆ ಇತರ ಋತುಮಾನ ಉದ್ಯೋಗಕ್ಕಾಗಿ ಸಹಾಯಧನ ನೀಡಬೇಕು.ಎಸ್.ಆರ್.ಚಿನ್ನರಾಜು ಅಧ್ಯಕ್ಷ,| ಮೀನುಗಾರ ಸಹಕಾರ ಸಂಘ, ಕಂಪ್ಲಿ-ಕೋಟೆ.