ವಸತಿ ನಿಲಯಕ್ಕೆ ಮೂಲಸೌಕರ್ಯ ಒದಗಿಸಿ

Kampli Mla
ಕಂಪ್ಲಿಯಲ್ಲಿ ಶಾಸಕ ಗಣೇಶ್ ಅವರೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು. ಸೌಮ್ಯಾ, ಸುಮಾ, ಹೇಮಾ, ರೋಜಾ, ಸುಧಾ ಇತರರಿದ್ದರು.
Published on

ಕಂಪ್ಲಿ: ಪಟ್ಟಣದ 6ನೇ ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಲು ತೆರಳಿದ್ದ ಶಾಸಕ ಜೆ.ಎನ್.ಗಣೇಶ್‌ಗೆ ಡಾ.ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ತೋಡಿಕೊಂಡರು.

ಹಾಸ್ಟೆಲ್‌ನಲ್ಲಿ ಮಲಗಲು ಬೆಡ್‌ಗಳಿಲ್ಲ. ಕೋವಿಡ್ ಸಂದರ್ಭದಲ್ಲಿ ಆರೈಕೆ ಕೇಂದ್ರವಾಗಿದ್ದರಿಂದ ಎಲ್ಲ ಹಾಸಿಗೆಗಳನ್ನು ಸುಟ್ಟು ಹಾಕಲಾಗಿದೆ. ಸೋಲಾರ್ ದೀಪ ಬೇಗನೆ ಹಾರಿ ಹೋಗಿ ಕತ್ತಲು ಆವರಿಸುತ್ತದೆ. ಇನ್‌ವರ್ಟರ್ ಇದ್ದರೂ ಅಷ್ಟಕಷ್ಟೆ. ಮೂಲ ಸೌಕರ್ಯ ಒದಗಿಸಬೇಕು. ಹಾಸ್ಟೆಲ್‌ನಲ್ಲಿ ಮೊಬೈಲ್ ಬಳಕೆ ನಿಷೇಧಿಸಿದ್ದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಮೊಬೈಲ್ ಬಳಕೆಗೆ ಅವಕಾಶ ಕೊಡಿಸುವಂತೆ ಸೌಮ್ಯಾ, ಸುಮಾ, ಹೇಮಾ, ರೋಜಾ, ಸುಧಾ ಒತ್ತಾಯಿಸಿದರು.

ಶಾಸಕರು ಹಾಸ್ಟೆಲ್‌ನ ಪ್ರಭಾರ ವಾರ್ಡನ್ ಕಾಳಮ್ಮಗೆ ಕರೆ ಮಾಡಿ ಮಾತನಾಡಿದರು. ಬಾಲಕಿಯರಲ್ಲಿ ಶಿಸ್ತು, ಅನಗತ್ಯ ಸಂಭಾಷಣೆ ತಪ್ಪಿಸಲು ಮೊದಲಿನಿಂದಲೂ ಮೊಬೈಲ್ ಬಳಕೆ ನಿಷೇಧಿಸಿದೆ. ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಅಂತರ್ಜಾಲ ಮಾಹಿತಿ ನಮ್ಮ ಮೊಬೈಲ್‌ಗೆ ಹಾಕಿದಾಗ ಪ್ರಿಂಟ್ ತೆಗೆದುಕೊಡುವ ವ್ಯವಸ್ಥೆಯಿದೆ. ಮೂಲಸೌಕರ್ಯಗಳ ಕೊರತೆಯಿದ್ದು ಒದಗಿಸುವಂತೆ ಕಾಳಮ್ಮ ಕೋರಿದರು.

ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಗುತ್ತಿಗೆದಾರ ರಂಗನಾಯಕಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಹಬೀಬ್‌ರೆಹಮಾನ್, ಬಿ.ನಾರಾಯಣಪ್ಪ, ಬಿ.ಜಾಫರ್, ಕೆ.ಮಸ್ತಾನ್‌ಸಾಬ್, ಕೆ.ಮನೋಹರ, ಪ್ರಹ್ಲಾದನಾಯಕ, ಡಿ.ಎಚ್.ಎಂ.ರವೀಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net