ಬೆಳೆ ನಷ್ಟ ಪರಿಹಾರ ಎಲ್ಲರಿಗೂ ವಿತರಿಸಿ

230222 Kampli Karnataka Raitha Sangha Appal
ಕಂಪ್ಲಿಯ ತಹಸೀಲ್ದಾರ್ ಗೌಸಿಯಾಬೇಗಂಗೆ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಗಂಗಾಧರ ಮನವಿ ಸಲ್ಲಿಸಿದರು.
Published on

ಕಂಪ್ಲಿ: ಬೆಳೆ ನಷ್ಟಗೊಂಡ ಎಲ್ಲ ರೈತರಿಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಗೌಸಿಯಾಬೇಗಂಗೆ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಗಂಗಾಧರ ಬುಧವಾರ ಮನವಿ ಸಲ್ಲಿಸಿದರು. ಕಂಪ್ಲಿ ತಾಲೂಕಿನ ಸಾವಿರಾರು ಎಕರೆಯಲ್ಲಿ ರೈತರು ಭತ್ತ, ಮೆಣಸಿನಕಾಯಿ ಬೆಳೆದು ಅಕಾಲಿಕ ಮಳೆಗೆ ಬೆಳೆ ನಷ್ಟವಾಗಿದೆ. ಎಲ್ಲ ರೈತರಿಗೂ ಬೆಳೆ ನಷ್ಟ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಜಿ.ಬಲಕುಂದೆಪ್ಪ ಮಾತನಾಡಿ, ವಿಜಯನಗರ ಜಿಲ್ಲೆ ರಚನೆ ನಂತರ ಕಂಪ್ಲಿ ತಾಲೂಕಿನ ಕೃಷಿ, ತೋಟಗಾರಿಕೆ ಅಧಿಕಾರಿಗಳು ರೈತರಿಗೆ ದೊರಕುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕಂಪ್ಲಿ ತಾಲೂಕಿನಲ್ಲಿ ಕೃಷಿ, ತೋಟಗಾರಿಕೆ ಕಚೇರಿ ಆರಂಭಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಎಪಿಎಂಸಿ ದ್ವಾರದಿಂದ ಪ್ರತಿಭಟನೆ ಮೆರವಣಿಗೆ ಸಾಗಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಪ್ರಮುಖರಾದ ಹಾದಿಮನಿ ಕಾಳಿಂಗವರ್ಧನ, ಸಂಘದ ಪದಾಧಿಕಾರಿಗಳಾದ ಕೆ.ದೊಡ್ಡಬಸಪ್ಪ, ಕೆ.ರಾಮಚಂದ್ರಪ್ಪ, ಜಿ.ರಾಮಾಂಜಿನಿ, ವಿ.ಬಿ.ಶ್ರೀನಿವಾಸ್, ಎಸ್.ಬಸವರಾಜ್, ಹರ್ಷಿತ್, ಎಚ್.ಬಸಪ್ಪ ಮೆಟ್ರಿ, ಕೆ.ಕರೀಗೌಡ, ಹನುಮಂತಪ್ಪ, ಮಲ್ಲಿಕಾರ್ಜುನ, ಕೆ.ಜಗದೀಶ್, ಎಂ.ಕನಕಪ್ಪ, ಎನ್.ಆಂಜನೇಯ, ಶಿವಕುಮಾರ್, ಶ್ರೀರಾಮು, ಗೌಡ್ರು ತಿಮ್ಮಪ್ಪ, ಪಿ.ಶೇಖಣ್ಣ, ಎನ್.ಬಾಬಯ್ಯ, ಶ್ರೀಕಾಂತ್ ಇತರರಿದ್ದರು.

ಸಮೀಕ್ಷೆಗಿಂತ ಹೆಚ್ಚಿನ ರೈತರ ಬೆಳೆ ನಷ್ಟ
ಅಕಾಲಿಕ ಮಳೆಗೆ ಸಮೀಕ್ಷೆಗಿಂತ ಹೆಚ್ಚಿನ ಪ್ರಮಾಣದ ರೈತರ ಬೆಳೆ ನಷ್ಟಕ್ಕಿಡಾಗಿದ್ದು, ನಷ್ಟಗೊಂಡ ಎಲ್ಲ ರೈತರಿಗೂ ನಷ್ಟ ಪರಿಹಾರ ವಿತರಣೆಯಾಗಬೇಕಿದೆ ಎಂದು ತಹಸೀಲ್ದಾರ್ ಗೌಸಿಯಾಬೇಗಂರನ್ನು ಬುಧವಾರ ಭೇಟಿ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಒತ್ತಾಯಿಸಿದರು.

ಜಂಟಿ ಸಮೀಕ್ಷೆ ವರದಿಗಿಂತ ಹೆಚ್ಚಿನ ಸಂಖ್ಯೆಯ ರೈತರ ಬೆಳೆ ನಷ್ಟವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಕಂಪ್ಲಿ ತಾಲೂಕಿನಲ್ಲಿ ನವೆಂಬರ್‌ತನಕ ಬಿದ್ದ ಅಕಾಲಿಕ ಮಳೆಗೆ 1130 ಹೆಕ್ಟೇರ್ ಭತ್ತ, 1538 ಹೆಕ್ಟೇರ್ ಮೆಣಸಿನಕಾಯಿ ಹಾನಿಯಾಗಿದೆ ಎಂದು ಸಮೀಕ್ಷೆ ವರದಿ ನೀಡಿದ್ದರು. ಮತ್ತೊಮ್ಮೆ ಜಂಟಿ ಸರ್ವೇ ಮಾಡಿ ಕೇವಲ 1818 ಹೆಕ್ಟೇರ್ ಭತ್ತ, ಮೆಣಸಿನಕಾಯಿ ಬೆಳೆ ನಷ್ಟವಾಗಿದೆ ಎಂದು ತಾವು ದೃಢೀಕರಿಸಿದ್ದೀರಿ. ಇಲ್ಲಿ ಕೆಲ ರೈತರು ನಷ್ಟ ಪರಿಹಾರದಿಂದ ವಂಚಿತರಾದಂತಾಗಿದೆ. ನಷ್ಟಪರಿಹಾರಕ್ಕಾಗಿ 4865 ರೈತರು ಅರ್ಜಿ ಸಲ್ಲಿಸಿದ್ದು, 3245 ಅರ್ಜಿಗಳು ಸ್ವೀಕೃತಿಯಾಗಿವೆ. ಇದರಲ್ಲಿ 3155 ರೈತರಿಗೆ ಮಾತ್ರ ಪರಿಹಾರ ದೊರಕಿದೆ. ಉಳಿದ ರೈತರಿಗೆ ಪರಿಹಾರ ಒದಗಿಸಬೇಕು. ನೆಲ್ಲೂಡಿ ಭಾಗದ 250ರೈತರು ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ಈತನಕ ಕೇವಲ 11 ಜನರಿಗೆ ಮಾತ್ರ ನಷ್ಟ ಪರಿಹಾರ ಬಂದಿದೆ. 2000 ರೈತರ ಬೆಳೆ ನಷ್ಟ ಪರಿಹಾರದ ಅರ್ಜಿ ಎಂಟ್ರಿ ಆಗಿಲ್ಲ. ಮತ್ತೊಮ್ಮೆ ಪರಿಶೀಲಿಸಿ ಬೆಳೆ ನಷ್ಟಗೊಂಡ ರೈತರಿಗೆ ನಷ್ಟಪರಿಹಾರ ದೊರಕಿಸಿಕೊಡುವಂತೆ ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಖಾಸಿಂಸಾಬ್, ನಗರ ಅಧ್ಯಕ್ಷ ಕೊಟ್ಟೂರು ರಮೇಶ್, ಪದಾಧಿಕಾರಿ ವಿ.ಟಿ.ನಾಗರಾಜ ಇತರರಿದ್ದರು.

ತಹಸೀಲ್ದಾರ್ ಗೌಸಿಯಾಬೇಗಂ ಸ್ಪಂದಿಸಿ, ನಷ್ಟಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲ ರೈತರ ಅರ್ಜಿಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ತಾಂತ್ರಿಕ ಕಾರಣಗಳಿಂದಾಗಿ ಕೆಲ ರೈತರ ಖಾತೆಗೆ ನಷ್ಟ ಪರಿಹಾರದ ಹಣ ಜಮೆಯಾಗಿಲ್ಲ. ಅರ್ಜಿ ಸಲ್ಲಿಸಿದ ಎಲ್ಲ ರೈತರ ಖಾತೆಗೆ ನಷ್ಟ ಪರಿಹಾರದ ಹಣ ಜಮೆಯಾಗಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net