

ಕಂಪ್ಲಿ: ನಕಲಿ ಸಾವಯವ ಉತ್ಪನ್ನಗಳ ಬಗ್ಗೆ ಸರ್ಕಾರ ಜಾಗೃತಿವಹಿಸಬೇಕು ಎಂದು ಕಂಪ್ಲಿ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಹೇಳಿದರು.
ಇಲ್ಲಿನ ಜಿಲ್ಲಾ ಕೃಷಿತರಬೇತಿ ಕೇಂದ್ರದಲ್ಲಿ ಶುಕ್ರವಾರ ಜರುಗಿದ ರೈತ ದಿನಾಚರಣೆಯಲ್ಲಿ ಮಾತನಾಡಿ, ನಕಲಿ ಸಾವಯವ ಉತ್ಪನ್ನಗಳಿಂದ ಗ್ರಾಹಕರಿಗೆ ವಂಚನೆಯಾಗುತ್ತಿದೆ ಎಂದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ರೈತರಿಗೆ ಸಬ್ಸಿಡಿ ಬದಲಿಗೆ ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಿ, ಎಂಎಸ್‌ಪಿ ಜಾರಿಗೊಳಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಗಂಗಾವತಿಯ ಕೃಷಿ ವಿಜ್ಞಾನಿ ಡಾ.ಎ.ವಿ.ಕರೇಗೌಡ ಮಾತನಾಡಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ಬೆಳೆಯಿಂದ ವಿಮುಖರಾಗಬೇಕು. ಭತ್ತಬೆಳೆಯಿಂದಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಒಂದು ಲಕ್ಷ ಹೆಕ್ಟರ್‌ನಷ್ಟು ಭೂಮಿ ಬಂಜರಾಗಿದ್ದು, ಮುಂದಿನ ಪೀಳಿಗೆ ಕುರಿತು ಎಚ್ಚರಿಕೆವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತ ನಂ.10ಮುದ್ದಾಪುರದ ಕಟ್ಟೆ ಶಂಕರ್, ತಾಲೂಕು ಶ್ರೇಷ್ಠ ಕೃಷಿ ಪ್ರಶಸ್ತಿ ವಿಜೇತ ಚಿಕ್ಕಜಾಯಿಗನೂರಿನ ಜೆ.ಅಮರೇಗೌಡರನ್ನು ಗೌರವಿಸಲಾಯಿತು. ಪುರಸಭಾಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಅಧ್ಯಕ್ಷತೆವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಕೆ.ಹೂವಣ್ಣ ಸಮಾರಂಭ ಉದ್ಘಾಟಿಸಿದರು. ಡಿಎಟಿಸಿ ಸಹಾಯಕ ಕೃಷಿ ನಿರ್ದೇಶಕಿ ಡಾ.ಸಿ.ಆರ್.ಅಭಿಲಾಷ, ಕೃಷಿ ಅಧಿಕಾರಿ ಶ್ರೀಧರ್, ಸಂಪನ್ಮೂಲವ್ಯಕ್ತಿ ಕೆ.ಕೃಷ್ಣಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ ವೀರೇಶ್, ನಗರ ಅಧ್ಯಕ್ಷ ಕೊಟ್ಟೂರು ರಮೇಶ್, ಕೃಷಿಕ ಸಮಾಜದ ಸದಸ್ಯ ಸೋಮಶೇಖರ್ ಇತರರಿದ್ದರು.