ಕಂಪ್ಲಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲಿ

Kampli formars protest
ಕಂಪ್ಲಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಪದಾಧಿಕಾರಿಗಳು ಮೆರವಣಿಗೆ ನಡೆಸಿದರು. ಪದಾಧಿಕಾರಿಗಳಾದ ವಿ.ಉಷಾ ದೇವೇಂದ್ರ, ಗೌಡ್ರು ಅಮರನಾಥ, ಬಿ.ಶಿವಪ್ಪಸ್ವಾಮಿ, ಜೆ.ಮಂಜುನಾಥ, ಜಿ.ವೆಂಕಟೇಶ, ಬಿ.ಕುಬೇರಪ್ಪ, ಯು.ಹುಲುಗಪ್ಪ, ಸಿ.ಮಲ್ಲಿಕಾರ್ಜುನ, ಎನ್.ಶಿವಪ್ಪ, ಬಿ.ಸೋಮಪ್ಪ, ಶಿವಪ್ಪ, ಕುರಿ ನಾಗಪ್ಪ ಇತರರಿದ್ದರು.
Published on

ಕಂಪ್ಲಿ: ಪಟ್ಟಣದಲ್ಲಿ ಸಹಕಾರಿ ಇಲ್ಲವೇ ಸರ್ಕಾರಿ ವಲಯದ ಸಕ್ಕರೆ ಕಾರ್ಖಾನೆ ಸ್ಥಾಪಿಸುವಂತೆ ಆಗ್ರಹಿಸಿ, ಇಲ್ಲಿನ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಪದಾಧಿಕಾರಿಗಳು ಉದ್ಭವ ಮಹಾಗಣಪತಿ ಗುಡಿಯಿಂದ ಪ್ರತಿಭಟನೆ ಮೆರವಣಿಗೆ ಸಾಗಿ ಅಂಬೇಡ್ಕರ್ ವೃತದಲ್ಲಿ ಸೋಮವಾರ ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬಿ.ಗಂಗಾಧರ ಮಾತನಾಡಿ, ಪಟ್ಟಣದಲ್ಲಿ ಹಿಂದೆ ಇದ್ದ ಸಹಕಾರಿ ಕ್ಷೇತ್ರದ ಸಕ್ಕರೆ ಕಾರ್ಖಾನೆ ನಾನಾ ಷಡ್ಯಂತ್ರಗಳಿಂದ ನಶಿಸಿ ಹೋಗಿದ್ದು, ಇದೀಗ ಅದೇ ಭೂಮಿಯಲ್ಲಿ ಸರ್ಕಾರ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕಿದೆ. 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕುರುಗೋಡಿನ ಪ್ರಚಾರ ಭಾಷಣದಲ್ಲಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಂಪ್ಲಿಯಲ್ಲಿ ಸಕ್ಕರೆ ಕಾರ್ಖಾನೆಯ ಜಾಗೆಯನ್ನು ವಶಪಡಿಸಿಕೊಂಡು ಹೊಸದಾಗಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತುಕೊಟ್ಟಿದ್ದು, ಅದರಂತೆ ನಡೆದುಕೊಳ್ಳಬೇಕಿದೆ. ಈಗಾಗಲೇ ಪರಿಸರ ಇಲಾಖೆ ಸಭೆ ನಡೆಸಿ ಸಕ್ಕರೆ ಕಾರ್ಖಾನೆ ಅಗತ್ಯವಿದೆ ಎಂದು ಸರ್ಕಾರಕ್ಕೆ ವರದಿ ನೀಡಿದೆ. ಮೇಲಾಗಿ ಸಕ್ಕರೆ ಕಾರ್ಖಾನೆಗೆ ಅಗತ್ಯ ನೀರನ್ನು ಬಳಸಿಕೊಳ್ಳಲು ನೀರಾವರಿ ಇಲಾಖೆಯಿಂದ ಅನುಮತಿ ದೊರಕಿದೆ. ಗಂಗಾವತಿ-ದರೋಜಿ ವಯಾ ಕಂಪ್ಲಿ ಮೂಲಕ ಬ್ರಾಡ್‌ಗೇಜ್ ರೈಲು ಸಂಪರ್ಕಕ್ಕೆ ಸಮೀಕ್ಷೆಯೂ ಮುಗಿದಿದೆ. ಸಕ್ಕರೆ ಕಾರ್ಖಾನೆ ಸ್ಥಾಪನೆ ಅನುಕೂಲಕರ ವಾತಾವರಣವಿದ್ದು ಕೂಡಲೇ ಸಕ್ಕರೆ ಕಾರ್ಖಾನೆ ಸ್ಥಾಪನೆ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಉದಾಸೀನ ತೋರಿದಲ್ಲಿ ಕಂಪ್ಲಿಯಿಂದ ಜಿಲ್ಲಾಧಿಕಾರಿ ಕಚೇರಿತನಕ ಪಾದಯಾತ್ರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

\

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net