ಪಾರದರ್ಶಕ ಎಲೆಕ್ಷನ್‌ಗೆ ಕೈಜೋಡಿಸಲು ಕೋರಿದ ಚುನಾವಣಾಧಿಕಾರಿ ಡಾ.ನಯನಾ

15 KAMPLI 02
Published on

ಕಂಪ್ಲಿ: ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಮತ್ತು ಪಕ್ಷಾತೀತವಾಗಿ ವಿಧಾನಸಭೆ ಚುನಾವಣೆ ನಡೆಸುವ ಹಿನ್ನಲೆಯಲ್ಲಿ ಅಧಿಕಾರಿಗಳು, ಪಕ್ಷದ ಮುಖಂಡರು, ಮತದಾರರು ಕೈಜೋಡಿಸಬೇಕು ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ.ನಯನಾ ಮನವಿ ಮಾಡಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ನಾಯಕರ ಸಭೆಯಲ್ಲಿ ಮಾತನಾಡಿ, ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ ಮೂರು ತಾಲೂಕುಗಳು ಒಳಪಡುತ್ತಿದ್ದು ಕಂಪ್ಲಿ ತಾಲೂಕಿನಲ್ಲಿ 105, ಕುರುಗೋಡು ತಾಲೂಕಿನಲ್ಲಿ 90 ಹಾಗೂ ಬಳ್ಳಾರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ 44 ಸೇರಿ ಒಟ್ಟು 239 ಮತಗಟ್ಟೆಗಳನ್ನು ಹೊಂದಿದೆ ಎಂದರು.

ಕ್ಷೇತ್ರದಲ್ಲಿ 2,10,630 ಮತದಾರರು, 35 ಮಂದಿ ಸೇವೆಯಲ್ಲಿರುವ ಮತದಾರರಿದ್ದಾರೆ. ಎಲ್ಲ ಮತದಾರರಿಗೂ ಗುರುತಿನ ಚೀಟಿ ವಿತರಿಸಲಾಗಿದೆ. ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು, 80 ವರ್ಷ ಮೇಲ್ಪಟ್ಟ ಕರೊನಾ ಬಾಧಿತರು, ವಿಶೇಷಚೇತನರಿಗೆ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, 80 ವರ್ಷ ಮೇಲ್ಪಟ್ಟವರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ತಹಸೀಲ್ದಾರ್ ಗೌಸಿಯಾಬೇಗಮ್ ಮಾತನಾಡಿದರು. ಇಒ ಕೆ.ಎಸ್.ಮಲ್ಲನಗೌಡ, ಸಿಒ ಡಾ.ಎನ್.ಶಿವಲಿಂಗಪ್ಪ, ಪಿಐ ಸುರೇಶ್ ಎಚ್.ತಳವಾರ್, ಪಿಎಸ್‌ಐ ಸಣ್ಣ ಈರೇಶ, ವಿವಿಧ ಪಕ್ಷಗಳ ಮುಖಂಡರಾದ ಅಳ್ಳಳ್ಳಿ ವೀರೇಶ್, ಇಟಗಿ ಬಸವರಾಜಗೌಡ, ಪ್ರಲ್ಹಾದ ನಾಯಕ, ಎಂ.ರಾಮಮೂರ್ತಿ, ನಾರಾಯಣರೆಡ್ಡಿ, ಎಚ್.ಎಂ.ವಿಶ್ವನಾಥಸ್ವಾಮಿ, ಎಂ.ಹೇಮರೆಡ್ಡಿ ಇತರರಿದ್ದರು.

ಇದಕ್ಕೂ ಮುನ್ನ ಕಂಪ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನೀತಿ ಸಂಹಿತೆ ತರಬೇತಿ ಕಾರ್ಯಕ್ರಮ ನಡೆಯಿತು. ತರಬೇತಿಯಲ್ಲಿ ಪಾಲ್ಗೊಂಡ ಕ್ಷೇತ್ರದ ಸಂಚಾರಿ ಜಾಗೃತ ದಳ, ವಿಡಿಯೋ ಸರ್ವೆಲೆನ್ಸ್ ತಂಡ, ವಿಡಿಯೋ ವೀಕ್ಷಣ ತಂಡ, ಸೆಕ್ಟರ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳಿಗೆ ಚುನಾವಣಾ ನೀತಿ ಸಂಹಿತೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಗುರುಬಸವರಾಜ, ನಾಗೇಂದ್ರ ತರಬೇತಿ ನೀಡಿದರು. ಕಂಪ್ಲಿ ಮತ್ತು ಕುರುಗೋಡು ತಾಲೂಕುಗಳ ಕಂದಾಯ ಅಧಿಕಾರಿಗಳು, ಪೊಲೀಸ್ ಸೇರಿ ನಾನಾ ಇಲಾಖೆಗಳ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net