

ಕಂಪ್ಲಿ: ಸಂಕ್ಲಾಪುರ ಬಳಿಯ ಎಚ್‌ಎಲ್‌ಸಿ ವಿತರಣಾ ನಾಲೆಗಳಲ್ಲಿ ಹೂಳು ತೆರವುಗೊಳಿಸಿಲ್ಲ. ಇದರಿಂದ ಜಮೀನುಗಳಿಗೆ ನೀರು ಹರಿಯುವುದು ಕಷ್ಟ ಎಂದು ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಚ್‌ಎಲ್‌ಸಿ ಕಾಲುವೆಯ ಡಿಪಿ3, ಡಿಪಿ6 ಹಾಗೂ ಡಿಪಿ7 ಉಪಕಾಲುವೆಗಳಲ್ಲಿನ ಹೂಳು ತೆಗೆಸಿಲ್ಲ, ಜಂಗಲ್ ಕಟಿಂಗ್ ಮಾಡಿಲ್ಲ. ಈ ವಿತರಣಾ ನಾಲೆಗಳ ಹಿತರಕ್ಷಣೆಗಾಗಿ ಲಸ್ಕರ್‌ಗಳು ನಿಗಾವಹಿಸುತ್ತಿಲ್ಲ ಎಂದು ಆಪಾದಿಸಿದರು. ಸಾವಿರಾರು ಎಕರೆಗೆ ನೀರೊದಗಿಸುವ ವಿತರಣಾ ನಾಲೆಗಳ ಹೂಳು ತೆರವು ಮಾಡದ ಕಾರಣ ಕೊನೇ ಭಾಗದವರಿಗೆ ನೀರು ಒದಗುವುದಿಲ್ಲ.
ಕೆಲ ವರ್ಷಗಳಿಂದ ಹೂಳು ತೆಗೆಸದಿದ್ದರಿಂದ ನೀರು ಹರಿಯುತ್ತಿಲ್ಲ. ನೀರಾವರಿ ನಿಗಮದ ಅಧಿಕಾರಿಗಳು, ನೀರು ಬಳಕೆದಾರರ ಸಂಘ ಮುತುವರ್ಜಿವಹಿಸಿಲ್ಲ. ವಿತರಣಾ ನಾಲೆಗಳ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಬೇಕು ಎಂದು ರೈತರಾದ ಜಿ.ಶ್ರೀನಿವಾಸ್, ಪಿ.ಪಾರ್ವತಮ್ಮ, ಮಾವಿನಹಳ್ಳಿ ಎಂ.ಗೋಪಾಲ್, ಎಂ.ಮಂಜುನಾಥ, ಬಿ.ಈಶ್ವರಯ್ಯ, ಟಿ.ಲಕ್ಷ್ಮಯ್ಯ, ಎಲ್.ರವಿ, ಡಿ.ವಿಶ್ವೇಶ್ವರಯ್ಯ ಒತ್ತಾಯಿಸಿದ್ದಾರೆ.
ನೀರಾವರಿ ನಿಗಮದ ಎಇಇ ಎ.ಶ್ರೀನಿವಾಸ್ ಪ್ರತಿಕ್ರಿಯಿಸಿ, ಕಳೆದ ಮೂರು ವರ್ಷಗಳಿಂದ ನೀರಾವರಿ ನಿಗಮದಿಂದ ಅನುದಾನ ಲಭ್ಯವಾಗಿಲ್ಲ. ಪ್ರತಿ ವರ್ಷವೂ ರೈತರ ಸಹಕಾರದಿಂದ ವಿತರಣಾ ನಾಲೆಗಳ ಹೂಳು ಎತ್ತಿಸಿ, ಜಂಗಲ್ ಕಟಿಂಗ್ ಮಾಡಿಸಲಾಗುವುದು. ಒಣ ಬೇಸಾಯಕ್ಕೆ ಮಾತ್ರ ವಿತರಣಾ ನಾಲೆ ನೀರು ಒದಗಿಸುತ್ತೇವೆ ಎಂದು ತಿಳಿಸಿದರು.