ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು - ಹಾಲು ಉತ್ಪಾದನೆಯಿಂದ ಸಾವಿರಾರು ರೂ. ಆದಾಯ, ಇತರರಿಗೂ ಮಾದರಿಯಾದ ಮಹಿಳೆ

KAMPLI 01A
ಕಂಪ್ಲಿ ತಾಲೂಕಿನ ಸಣಾಪುರದಲ್ಲಿ ಕನಕಗಿರಿ ಶಿಲ್ಪಾ ಸಾಕಣೆ ಮಾಡಿರುವ ಹಸುಗಳು.
Published on

ಕಂಪ್ಲಿ: ತಾಲೂಕಿನ ಸಣಾಪುರ ಗ್ರಾಮದ ಕನಕಗಿರಿ ಶಿಲ್ಪಾ 10 ಸಾವಿರ ರೂ. ಸಾಲ ಪಡೆದು ಒಂದು ಹಸು ಖರೀದಿಸಿ ಹೈನುಗಾರಿಕೆ ಶುರು ಮಾಡಿದ್ದು, ಈಗ ಹತ್ತಾರು ಜಾನುವಾರುಗಳ ಸಾಕಣೆಯೊಂದಿಗೆ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 10 ಸಾವಿರ ರೂ. ಸಾಲ ಪಡೆದಿದ್ದರು. ಬಳಿಕ ಮತ್ತೆ ಒಂದೂವರೆ ಲಕ್ಷ ರೂ.ಸಾಲ ಪಡೆದು ನಾನಾ ತಳಿಯ ಹಸುಗಳನ್ನು ಸಾಕಣೆ ಮಾಡುತ್ತ, ಹೈನುಗಾರಿಕೆಯಲ್ಲಿ ಯಶಸ್ಸು ಕಂಡಿದ್ದಾರೆ. ಗಿರ್, ಸಾಯಾವಾಲ್, ಜರ್ಸಿ ಸೇರಿದಂತೆ ದೇಸಿ ತಳಿಯ ಎಂಟು ಆಕಳು, ಹೊಂಗಲ್ ತಳಿಯ ಎರಡು ಹೋರಿಗಳನ್ನು ಶಿಲ್ಪಾ ಸಾಕುತ್ತಿದ್ದಾರೆ. ಈ ಜಾನುವಾರುಗಳಿಗಾಗಿ ಮುಕ್ಕಾಲು ಎಕರೆಯಲ್ಲಿ ಮೇವು ಬೆಳೆದಿದ್ದು, ಭತ್ತದ ಹುಲ್ಲು ಕೂಡ ಮೇಯಿಸುತ್ತಾರೆ. ಹಿಂಡಿ, ಭತ್ತದ ತೌಡು ಕೊಟ್ಟು ಉಪಚರಿಸುತ್ತಾರೆ.

ಹೈನುಗಾರಿಕೆಯಿಂದ ನಿತ್ಯ ಒಂದು ಅವಧಿಗೆ 10 ಲೀ. ಹಾಲು ಉತ್ಪಾದನೆಯಾಗುತ್ತಿದ್ದು, 5 ಲೀ. ಸಾರ್ವಜನಿಕರಿಗೆ, 5 ಲೀ. ಡೈರಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಲೀಟರ್‌ಗೆ 50 ರೂ.ನಂತೆ ಪ್ರತಿದಿನ ಎರಡು ಅವಧಿಯಲ್ಲಿ 20 ಲೀ. ಮಾರಾಟ ಮಾಡಿ, ಪ್ರತಿದಿನ ಸಾವಿರಾರು ರೂ. ದುಡಿಯುತ್ತಿದ್ದಾರೆ. ಎಂಟು ಆಕಳ ಕರುಗಳನ್ನು ಮಾರಾಟ ಮಾಡಿದ್ದು, 1.50 ಲಕ್ಷ ರೂ. ಆದಾಯ ಬಂದಿದೆ.

ಬಂದ ಆದಾಯದಲ್ಲಿ ಇಬ್ಬರು ಪುತ್ರಿಯರ ಶಿಕ್ಷಣ ಹಾಗೂ ಮನೆ ನಿರ್ವಹಣೆ ಮಾಡಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಜಾನುವಾರು ಸಾಕಣೆಗೆ ಹಿಂದೇಟು ಹಾಕುತ್ತಿರುವ ಇಂದಿನ ದಿನಮಾನಗಳಲ್ಲಿ ಹೈನುಗಾರಿಕೆ ಮೂಲಕ ಆದಾಯ ಗಳಿಸಿ ಮನೆ ನಿರ್ವಹಿಸಿಕೊಂಡು ಹೋಗುತ್ತಿರುವ ಶಿಲ್ಪಾ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎನ್ನುತ್ತಾರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯ ಅಧಿಕಾರಿ ರೇಖಾ. ಇನ್ನು ಹೈನುಗಾರಿಕೆ ಜತೆಗೆ ಶಿಲ್ಪಾ ಟೈಲರಿಂಗ್ ಕೂಡ ಮಾಡುತ್ತಿದ್ದಾರೆ.

ಕೋಟ್:

ಹೈನಗಾರಿಕೆ ವೃತ್ತಿಯನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯಿದೆ. ರೊಟ್ಟಿ ಬಡಿದು ಮಾರಾಟ ಮಾಡುವ ಆಲೋಚನೆಯಿದೆ. ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ನಿರಂತರ ಚಟುವಟಿಕೆಗಳಿಂದ ಆದಾಯ ಗಳಿಸಬಹುದು. ಪಡೆದ ಸಾಲವನ್ನು ನಿಗಧಿತ ಉದ್ದೇಶಕ್ಕೆ ಬಳಸಿದರೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ.

> ಕನಕಗಿರಿ ಶಿಲ್ಪಾ ಮಂಜುನಾಥ, ಕಂಪ್ಲಿ.

ಕೋಟ್:

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗೃಹಿಣಿ ಶಿಲ್ಪಾ ಸಾಲ ಪಡೆದು ಜೀರೋದಿಂದ ಹಿರೋಯಿನ್ ಆಗಿದ್ದಾರೆ. ಅವರ ಪರಿಶ್ರಮ ಮತ್ತು ಸಾಧನೆ ಇತರ ಮಹಿಳೆಯರಿಗೆ ಮಾದರಿಯಾಗಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು.

> ಎಂ.ಎ.ಹಾಲಪ್ಪ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net