ಭಾವೈಕ್ಯತೆ ಹದಗೆಡಿಸುತ್ತಿದೆ ಕಾಂಗ್ರೆಸ್ - ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಆರೋಪ

270222 Kampli BJP Protest Aganist Congress
ಕಂಪ್ಲಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಮಾತನಾಡಿದರು.
Published on

ಕಂಪ್ಲಿ: ಹಿಂದು ಮುಸ್ಲಿಂರ ಮಧ್ಯೆ ಭಾವೈಕ್ಯತೆ ಹದಗೆಡಿಸುವಲ್ಲಿ ಕಾಂಗ್ರೆಸ್ ನಿರತವಾಗಿದೆ ಎಂದು ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಆರೋಪಿಸಿದರು.

ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದರು. ಹಿಂದುಗಳ ಹತ್ಯೆಗೆ ಕಾಂಗ್ರೆಸ್ಸ್ ಪ್ರಚೋದಿಸಿ ಹಿಂದು-ಮುಸ್ಲಿಮರ ಮಧ್ಯೆ ಸಾಮರಸ್ಯ ಹಾಳುಮಾಡಿ ರಾಜಕೀಯ ಮಾಡುತ್ತಿದೆ. ಕರೊನಾ ನಂತರದ ಸ್ಥಿತಿಗತಿ, ರಾಜ್ಯದ ಅಭಿವೃದ್ಧಿ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶನೀಡದೆ ಸದನ ಸಮಯವನ್ನು ಹಾಳು ಮಾಡಿ ಕಾಂಗ್ರೆಸ್ ಜನವಿರೋಧಿ ನೀತಿ ತೋರಿದೆ. ಹರ್ಷ ಹತ್ಯೆಯ ಆರೋಪಿಗಳ ಬಂಧನವಾಗಿದ್ದು, ಇವರನ್ನು ಶೀಘ್ರ ಶಿಕ್ಷೆಗೆ ಗುರಿಪಡಿಸುವ ಕ್ರಮಕೈಗೊಳ್ಳುವಲ್ಲಿ ಬೊಮ್ಮಾಯಿ ಸರ್ಕಾರ ಜಾಗೃತಿ ತೋರಲಿದೆ ಎಂದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಅಳ್ಳಳ್ಳಿ ವೀರೇಶ್ ಮಾತನಾಡಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪರ ಮೇಲೆ ಗೂಂಡಾವರ್ತನೆ ತೋರಿದ ಡಿ.ಕೆ.ಶಿವಕುಮಾರರನ್ನು ಸದನದಿಂದ ವಜಾಗೊಳಿಸಬೇಕು. ಕಾಶ್ಮೀರದ ಲಾಲ್ ಚೌಕ್, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣಕ್ಕೆ ಅವಕಾಶ ನೀಡದ ಕಾಂಗ್ರೆಸ್ಸಿಗರು ರಾಷ್ಟ್ರಧ್ವಜದ ಪಾಠ ಹೇಳುವುದು ಹಾಸ್ಯಾಸ್ಪದ ಎಂದರು. ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಬಿಎಸ್‌ವೈ ಹುಟ್ಟುಹಬ್ಬ ಆಚರಿಸಲಾಯಿತು. ಇದಕ್ಕೂ ಮುನ್ನಾ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ನಾಯ್ಡ್, ಪ್ರಮುಖರಾದ ಪಿ.ಬ್ರಹ್ಮಯ್ಯ, ಎನ್.ಪುರುಷೋತ್ತಮ, ಜಿ.ಸುಧಾಕರ, ಬಿ.ಸಿದ್ದಪ್ಪ, ಕೊಡಿದಲರಾಜು, ವಿ.ವಿದ್ಯಾಧರ, ಶಿವರಾಜ್ ಕಟ್ಟೆ, ಕೃಷ್ಣನಾಯಕ ಸೇರಿ ಪುರಸಭೆ ಸದಸ್ಯರು, ಕಾರ್ಯಕರ್ತರು ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net