ಆರೋಗ್ಯ ಕೇಂದ್ರಗಳಿಗೆ ಸೋಲಾರ್ ಪವರ್

Kampli Solar
ರಾಮಸಾಗರದ ಪಿಎಚ್‌ಸಿ ಮೇಲೆ ಸೋಲಾರ್ ಅಳವಡಿಕೆ ಮಾಡಿರುವುದು.
Published on

ಬಂಗಿ ದೊಡ್ಡಮಂಜುನಾಥ

ಕಂಪ್ಲಿ : ಉತ್ತಮ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ತಾಲೂಕಿನ ಒಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾಗಶಃ ಮತ್ತು ರಾಮಸಾಗರ, ದೇವಸಮುದ್ರ, ಶ್ರೀರಾಮರಂಗಾಪುರ, ಎಮ್ಮಿಗನೂರು ಪಿಎಚ್‌ಸಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸೋಲಾರ್ ಅಳವಡಿಸಲಾಗಿದೆ. ಇದರಿಂದ ದಿನಪೂರ್ತಿ ಕೇಂದ್ರಗಳಲ್ಲಿ ವಿದ್ಯುತ್ ಬಳಕೆಗೆ ಅನುಕೂಲವಾಗಿದೆ.

ಮಳೆಗಾಲ ಆರಂಭಗೊಂಡರೆ ಸಾಕು ಗಾಳಿ, ಗುಡುಗು, ಮಳೆಯಿಂದಾಗಿ ವಿದ್ಯುತ್ ವ್ಯತ್ಯಯ ವಾಗುತ್ತಿತ್ತು. ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ನೆಪದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿತ್ತು. ಹೀಗಾಗಿ ಆರೋಗ್ಯ ಕೇಂದ್ರಗಳು ಕತ್ತಲಲ್ಲಿ ಇರುತ್ತಿದ್ದವು. ಇದರಿಂದ ತುರ್ತು ಚಿಕಿತ್ಸೆ ನೀಡುವಲ್ಲಿ ಬೆಳಕಿನ ತೊಂದರೆಯಾಗುತ್ತಿತ್ತು. ವೈದ್ಯಕೀಯ ಉಪಕರಣಗಳ ಬಳಕೆಗೂ ಸಮಸ್ಯೆಯಾಗುತ್ತಿತ್ತು.
ಇದನ್ನು ತಪ್ಪಿಸಲು ಎನ್‌ಎಚ್‌ಎಂ ಮತ್ತು ಜಿಲ್ಲಾಡಳಿತದಿಂದ ಆರೋಗ್ಯ ಕೇಂದ್ರಗಳಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸಲಾಗಿದೆ.

ಯುಪಿಎಸ್‌ನಿಂದ ಕೇಂದ್ರದ ಎಲ್ಲ ಕೋಣೆಗಳಿಗೆ ವಿದ್ಯುತ್ ದೊರಕುತ್ತಿರಲಿಲ್ಲ. ಸೋಲಾರ್ ಅಳವಡಿಕೆಯಿಂದಾಗಿ ಆರೋಗ್ಯ ಕೇಂದ್ರದ ಎಲ್ಲೆಡೆ ಯಾವಾಗಲೂ ವಿದ್ಯುತ್ ಇರಲು ಅನುಕೂಲವಾಗಿದೆ. ಬಿಸಿಲು ಬೀಳದೆ ಮೋಡ ಕವಿದಾಗ ಒಂದರೆಡು ತಾಸು ವಿದ್ಯುತ್ ವ್ಯತ್ಯಯವಾಗಬಹುದು. ಜೆಸ್ಕಾಂ ವಿದ್ಯುತ್ ಜೊತೆ ಸೋಲಾರ್ ಅಳವಡಿಕೆಯಿಂದ ದಿನದ 24ತಾಸು ವಿದ್ಯುತ್ ಪಡೆಯಲು ಸಹಾಯಕವಾಗಿದೆ. ಕಳೆದ ಮೂರ‌್ನಾಲ್ಕು ತಿಂಗಳಿಂದ ಸೋಲಾರ್ ಅಳವಡಿಕೆಗೊಂಡಿದ್ದು, ವಿದ್ಯುತ್‌ಬಿಲ್‌ನಲ್ಲಿ ಶೇ.15 ಉಳಿತಾಯವಾಗಿದೆ. ಸೋಲಾರ್ ದಕ್ಷತೆಯುಳ್ಳ ಲೈಟ್ಸ್ ಅಳವಡಿಕೆಯಿಂದ ಸೋಲಾರ್ ಮತ್ತು ಜೆಸ್ಕಾಂ ವಿದ್ಯುತ್‌ಗೂ ಬೆಳಗುತ್ತವೆ. ಮೈನರ್ ಶಸ್ತ್ರಚಿಕಿತ್ಸೆಗೂ ಅನುಕೂಲವಾಗಿದೆ. ಬಿಸಿ ನೀರು ದೊರಕುತ್ತದೆ. ಎಕ್ಸಾಮಿನೇಷನ್ ಲೈಟ್ಸ್, ಆಕ್ಸಿಜನ್, ಫೋಟೋಥೆರಪಿ, ಇಂಕೊಬೆಟರ್(ಬೇಬಿ ವಾರ್ಮರ್), ಹೀಟರ್ ಸೇರಿ ವೈದ್ಯಕೀಯ ಉಪಕರಣಗಳ ಬಳಕೆಗೆ ಸೋಲಾರ್ ಉಪಯುಕ್ತವಾಗಿದೆ.

ಪ್ರತಿ ಆರೋಗ್ಯ ಕೇಂದ್ರಕ್ಕೂ ಎನ್‌ಎಚ್‌ಎಂ ಮತ್ತು ಜಿಲ್ಲಾಡಳಿತದಿಂದ ತಲಾ 6.50 ಲಕ್ಷ ರೂ.ಯಲ್ಲಿ 5 ಕೆವಿ ಸಾಮರ್ಥ್ಯದ ಸೋಲಾರ್ ಅಳವಡಿಕೆ ಮಾಡಿದ್ದು, ಉತ್ತಮ ವಿದ್ಯುತ್ ಸೌಲಭ್ಯ ದೊರಕಿದೆ. ಉಪ ಕೇಂದ್ರಗಳಿಗೂ ಸೋಲಾರ್ ಅಳವಡಿಕೆ ವಿಸ್ತರಿಸುವ ಯೋಜನೆಯಿದೆ. ಶ್ರೀರಾಮರಂಗಾಪುರ ಪಿಎಚ್‌ಸಿಯ ಹಳೇ ಕಟ್ಟಡಕ್ಕೆ ಸೋಲಾರ್ ಅಳವಡಿಕೆಯಾಗಿದು,್ದ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.| ಡಾ.ಜಿ.ಅರುಣ್ ತಾಲೂಕು ಮೇಲ್ವಿಚಾರಣಾಧಿಕಾರಿ, ಸಿಎಚ್‌ಸಿ, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net