

ಕಂಪ್ಲಿ: ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪುರಸಭೆ ಆವರಣದಲ್ಲಿ ರಾಜ್ಯ ಪೌರ ನೌಕರರ ಸಂಘದ ಸದಸ್ಯರು ನಡೆಸುತ್ತಿರುವ ಅನಿರ್ದಿಷ್ಟಾವದಿ ಮುಷ್ಕರ ಸ್ಥಳಕ್ಕೆ ಶಾಸಕ ಜೆ.ಎನ್. ಗಣೇಶ್ ಭೇಟಿ ನೀಡಿದರು. ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರರೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಕೋರುತ್ತೇನೆ. ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಮರಳುವಂತೆ ಕೋರಿದರು.
ನೌಕರರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶಬಾಬು ಮಾತನಾಡಿ, ಹಲವು ವರ್ಷಗಳಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದರೂ ಈಡೇರಿಲ್ಲ. ಹೀಗಾಗಿ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರ ಅನುಮತಿಯಂತೆ ಮುಷ್ಕರ ಮುಂದುವರಿಸುತ್ತೇವೆ ಎಂದರು.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಮುಖ್ಯಾಧಿಕಾರಿ ಕೆ.ದುರುಗಣ್ಣ, ಪೌರ ಸೇವಾ ನೌಕರರ ಸಂಘದ ತಾಲೂಕು ಗೌರವಾಧ್ಯಕ್ಷ ನಾಗಭೂಷಣ, ಉಪಾಧ್ಯಕ್ಷ ಓಬಳೇಶ, ನೌಕರರಾದ ರಮೇಶ ಬೆಳಂಕರ್, ಕೆ.ವೆಂಕಟೇಶ, ಮಲ್ಲೇಶ್, ಜ್ಯೋತಿ, ಪ್ರಮುಖರಾದ ಸಿ.ಆರ್.ಹನುಮಂತ, ಬಿ.ನಾರಾಯಣಪ್ಪ, ಆಟೋರಾಘು, ಎಂ.ಸಿ.ಮಾಯಪ್ಪ ಇತರರಿದ್ದರು.
ಬೆಂಬಲ: ಪುರಸಭೆ ನೌಕರರ ಬೇಡಿಕೆಗಳು ಸಮಂಜಸವಾಗಿದ್ದು, ಅವರ ಬೇಡಿಕೆಗಳನ್ನು ಈಡೇರಿಸಿ ಕರ್ತವ್ಯಕ್ಕೆ ಮರಳುವಂತೆ ಸರ್ಕಾರ ಆದೇಶಿಸಬೇಕು ಎಂದು ಪುರಸಭೆಯ ಎಲ್ಲ ಸದಸ್ಯರು, ಪಟ್ಟಣದ ನಾನಾ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು.